ಮೈಸೂರು:ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಜಾರಿಯಾಗಿದೆ. ಇದರೊಂದಿಗೆ ಪೋಲಿಸ್ ಇಲಾಖೆಯ ಜವಾಬ್ದಾರಿ ಹೆಚ್ಚಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ತಿಳಿಸಿದ್ದಾರೆ.
ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ಹಾಗೂ ಪಶುಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಪಶುಸಂಗೋಪನೆ ಮತ್ತು ಪೊಲೀಸ್ ಇಲಾಖೆ ಜೊತೆಗೂಡಿ ಕೆಲಸ ಮಾಡಿದರೆ ಮೈಸೂರು ಜಿಲ್ಲೆಯಲ್ಲಿ ಅಕ್ರಮ ಗೋವುಗಳ ಸಾಗಣೆ ಮತ್ತು ವಧೆಗೆ ಕಡಿವಾಣ ಬೀಳುತ್ತದೆ. ಅಲ್ಲದೆ ಚೆಕ್ ಪೋಸ್ಟ್ನಲ್ಲಿ ಕಡ್ಡಾಯವಾಗಿ ಒಬ್ಬ ಪಶುವೈದ್ಯ ಇರಲೇಬೇಕು ಎಂದು ಹೇಳಿದರು.
ಭಾರತ ದೇಶವು ಕೃಷಿಪ್ರಧಾನ ದೇಶವಾಗಿದ್ದು, ಗೋವುಗಳನ್ನು ನಾವು ಪೂಜ್ಯಭಾವದಿಂದ ಗೌರವಿಸುತ್ತೇವೆ. ಹೀಗಾಗಿ ನಮ್ಮ ಸರ್ಕಾರವು ಗೋವುಗಳ ಸಂರಕ್ಷಣೆಗೆಂದು ಈ ಕಾಯ್ದೆಯನ್ನು ಜಾರಿಮಾಡಿದೆ. ಇದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಪಶುಸಂಗೋಪನೆ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಬೇಕು ಎಂದರು.
'ಗ್ರಾಮಸಭೆ ನಡೆಸಿ ಜಾಗೃತಿ ಮೂಡಿಸಿ'
ಗೋಹತ್ಯೆ ನಿಷೇಧ ಕಾಯ್ದೆಯ ಎಲ್ಲಾ ಅಂಶಗಳನ್ನು ರೈತರಿಗೆ ಮನದಟ್ಟಾಗುವಂತೆ ಕಾಯ್ದೆಯ ಬಗ್ಗೆ ಪ್ರತಿ ಹಳ್ಳಿಗಳಿಗೂ ತೆರಳಿ ಗ್ರಾಮಸಭೆ ನಡೆಸುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಬೇಕು. ಗಂಡು ಕರುಗಳನ್ನು ಕನಿಷ್ಠ ಮೂರು ತಿಂಗಳ ಕಾಲ ನೋಡಿಕೊಂಡರೆ ಸಾಕು, ಆನಂತರ ಇಲಾಖೆಯ ಮೂಲಕ ಕರುಗಳನ್ನು ಗೋಶಾಲೆಗಳಿಗೆ ಕಳುಹಿಸಲಾಗುತ್ತದೆ ಎಂಬುದನ್ನು ಮನವರಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.