ರಾಜ್ಯ ರೈತ ಸಂಘಟನೆ ಒಕ್ಕೂಟ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು. ಮೈಸೂರು:ಎಪಿಎಂಸಿ ಕಾಯ್ದೆಯನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿರುವ ನಿರ್ಣಯವನ್ನು ಸ್ವಾಗತಿಸಿದ ರೈತರು, ಮೈಸೂರಿನ ಬಂಡಿಪಾಳ್ಯದ ಎಪಿಎಂಸಿ ಕಚೇರಿಯ ಮುಂದೆ ಪರಸ್ಪರ ಸಿಹಿ ಹಂಚಿ, ವಿಜಯೋತ್ಸವ ಆಚರಿಸಿದರು. ನೂತನ ಸರಕಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಕೃತಜ್ಞತೆ ಸಲ್ಲಿಸಿದೆ.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ''ಎಪಿಎಂಸಿ ಕಾಯ್ದೆಯನ್ನು ಹಿಂಪಡೆಯುವ ನಿರ್ಣಯ ಕೈಗೊಳ್ಳುವ ಮೂಲಕ ರಾಜ್ಯ ಸರಕಾರ ರೈತರ ಪರ ನಿಂತಿದೆ. ಮುಂದಿನ ದಿನಗಳಲ್ಲಿ ಭೂ ಸುಧಾರಣೆ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಬೇಕು. ಈ ಮೂಲಕ ರೈತರ ಹಿತರಕ್ಷಣೆ ಮಾಡಬೇಕು'' ಎಂದರು. ''ಎಪಿಎಂಸಿ ಕಾಯ್ದೆ ವಾಪಸ್ ಪಡೆದು, ಎಪಿಎಂಸಿಯಲ್ಲಿ ರೈತ ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು. ರೈತ ಸಮುದಾಯದ ಪರ ಸರಕಾರ ನಿಲ್ಲಬೇಕು. ಅಲ್ಲದೇ, ಪಠ್ಯ ಪರಿಷ್ಕರಣೆ ಮಾಡಲು ಮುಂದಾಗಿರುವುದು ಕೂಡ ಸ್ವಾಗತಾರ್ಹ'' ಎಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ, ಮೈಸೂರು ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಂಡಕಳ್ಳಿ ಮಹೇಶ್, ಸಂಘಟನಾ ಕಾರ್ಯದರ್ಶಿಗಳಾದ ಚಿಕ್ಕನಹಳ್ಳಿ ರಾಘವೇಂದ್ರ, ಬಸವರಾಜು, ಯುವ ಘಟಕದ ಜಿಲ್ಲಾ ಕಾರ್ಯದರ್ಶಿ, ಕೋಚನಹಳ್ಳಿ ಮಹೇಶ್ ಇತರರು ಇದ್ದರು.
ಕುರುಬೂರು ಶಾಂತಕುಮಾರ್ ಸ್ವಾಗತ:''ಎಪಿಎಂಸಿ ತಿದ್ದುಪಡಿ ಕಾಯ್ದೆ ರಾಜ್ಯ ಸರ್ಕಾರ ರದ್ದು ಮಾಡಿರುವುದು ಒಳ್ಳೆಯ ವಿಚಾರ. ನಾಲ್ಕು ವರ್ಷಗಳಿಂದ ರೈತ ಸಂಘಟನೆಗಳು ಸತತ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ರೈತರ ಹೋರಾಟಕ್ಕೆ ಸ್ಪಂದನೆ ಸಿಕ್ಕಿದೆ. ಎಪಿಎಂಸಿಯಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಲು ಹಾಗೂ ಬಲವರ್ಧನೆ ಮಾಡಲು ರೈತ ಮುಖಂಡರ ಸಭೆ ಕರೆದು ಚರ್ಚಿಸುವ ಮೂಲಕ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು'' ಎಂದು ರಾಜ್ಯ ರೈತ ಸಂಘಟನೆ ಒಕ್ಕೂಟ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮನವಿ ಮಾಡಿದ್ದಾರೆ.
''ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ನೂತನ ಎಪಿಎಂಸಿ ಕಾಯ್ದೆಯನ್ನು ಜಾರಿಗೊಳಿಸಿತ್ತು. ಆ ಕಾಯ್ದೆ ರದ್ದು ಮಾಡಿ, ಹಳೆ ಕಾಯ್ದೆಯ ಮೂಲ ಸ್ವರೂಪ ಉಳಿಸಿಕೊಂಡು ಸುಧಾರಿತ ರೂಪವಿರುವ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ'' ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದರು.
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಕೃಷಿ ಮಾರುಕಟ್ಟೆ ಇಲಾಖೆಯ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಜೂನ್ 14ರಂದು ಎಚ್.ಕೆ.ಪಾಟೀಲ್ ಸಭೆ ನಡೆಸಿದ್ದರು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ''ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಜುಲೈನಲ್ಲಿ ಜರುಗಲಿರುವ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ. ಈ ಕಾಯಿದೆಯ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳನ್ನು ಮಾಡಲಾಗಿದೆ. ಮುಂದಿನ ವಾರ ಮತ್ತೊಂದು ಸಭೆ ಜರುಗಿಸಿ ತಜ್ಞರ ಅಭಿಪ್ರಾಯ ಪಡೆದು ವಿಧೇಯಕಕ್ಕೆ ಅಂತಮ ಸ್ಪರ್ಶ ಕೊಡಲಾಗುವುದು'' ಎಂದು ಹೇಳಿದ್ದರು.
ಇದನ್ನೂ ಓದಿ:Basavaraj Bommai: ಬಿಜೆಪಿಯ ನಾಲ್ವರು ಸಿಎಂಗಳಲ್ಲಿ ಮೂವರು ಲಿಂಗಾಯತರು- ಕಾಂಗ್ರೆಸ್‌ಗೆ ಬಸವರಾಜ ಬೊಮ್ಮಾಯಿ ತಿರುಗೇಟು