ಮೈಸೂರು: ಲೋಕಾಯುಕ್ತ ಸಂಸ್ಥೆಯನ್ನು ಪುನಃ ಸ್ಥಾಪಿಸಿ ಭ್ರಷ್ಟಾಚಾರ ಆರೋಪಗಳಿರುವ 326 ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕೆಂದು ಎಂಎಲ್ಸಿ ಹೆಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ.
‘ಮಾಜಿ ಸಿಎಂಗಳಿಬ್ಬರೂ ಭ್ರಷ್ಟಾಚಾರದ ಪರವೇ?’
ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, 'ಐಟಿ ದಾಳಿಯನ್ನು ಯಡಿಯೂರಪ್ಪನವರೇ ಸ್ವಾಗತಿಸಿದ್ದಾರೆ. ಇಂಥ ಸಂದರ್ಭದಲ್ಲಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಹೇಳುವುದು ಸರಿಯಲ್ಲ. ಸಾಂವಿಧಾನಿಕ ಸಂಸ್ಥೆಗಳು ಭ್ರಷ್ಟಾಚಾರ ಆರೋಪದ ಮೇಲೆ ದಾಳಿ ನಡೆಸುವಾಗ ಈ ರೀತಿ ಟೀಕೆಗಳು ಸರಿಯಲ್ಲ. ಮಾಜಿ ಮುಖ್ಯಮಂತ್ರಿಗಳಿಬ್ಬರೂ ಭ್ರಷ್ಟಾಚಾರದ ಪರವಿದ್ದಾರೆಯೇ' ಎಂದು ಪ್ರಶ್ನಿಸಿದರು.
‘ಟೆಂಡರ್ ಕ್ಲಿಯರ್ ಬಗ್ಗೆ ನಾನೇ ಕೇಂದ್ರ ನಾಯಕರ ಗಮನಕ್ಕೆ ತಂದಿದ್ದೆ’
'ಬೃಹತ್ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಐಟಿ ಮತ್ತು ಇಡಿ ದಾಳಿಗಳು ನಡೆಯುತ್ತಿದ್ದು, ಇದರಿಂದ ರಾಜಕೀಯ ವಾಸನೆ ಬರುತ್ತಿದೆ ಎಂಬುದು ಸರಿಯಲ್ಲ. ಯಡಿಯೂರಪ್ಪನವರು ಅಧಿಕಾರದಿಂದ ಇಳಿಯುವ ಮುನ್ನ ನೀರಾವರಿ ನಿಗಮಗಳಿಗೆ ಸಂಬಂಧಿಸಿದ 20 ಸಾವಿರ ಕೋಟಿ ರೂ.ಗೂ ಅಧಿಕ ಟೆಂಡರ್ ಕ್ಲಿಯರ್ ಮಾಡಿದ್ದರು. ಈ ಬಗ್ಗೆ ನಾನು ಸಂಬಂಧಿಸಿದ ಅಧಿಕಾರಿಗಳು ಹಾಗೂ ಕೇಂದ್ರ ನಾಯಕರ ಗಮನಕ್ಕೆ ತಂದಿದ್ದೆ. ಆ ನಂತರ ಐಟಿ ಮತ್ತು ಇಡಿ ದಾಳಿಗಳು ನಡೆದಿವೆ' ಎಂದು ಹೇಳಿದರು.