ಮಾಜಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು. ಮೈಸೂರು:''ಮೈಸೂರು- ಕೊಡುಗು ಲೋಕಸಭಾ ಚುನಾವಣೆಗೆ ಇನ್ನೂ 8 ತಿಂಗಳು ಇದೆ. ಪಕ್ಷ ಯಾವುದೇ ಜವಾಬ್ದಾರಿ ವಹಿಸಿದರೂ ನಿಭಾಯಿಸಲು ಸಿದ್ದ'' ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಮೈಸೂರು- ಕೊಡುಗು ಲೋಕಸಭೆಗೆ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧೆ ಮಾಡಬೇಕೆಂಬ ಅಭಿಮಾನಿಗಳ ಒತ್ತಡವಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಪಕ್ಷ ಯಾವ ತೀರ್ಮಾನ ಕೈಗೊಳ್ಳುತ್ತದೆ ನೋಡೋಣ. ಪಕ್ಷ ವಹಿಸಿರುವ ಕಾರ್ಯವನ್ನು ಪಾಲನೆ ಚಾಚು ತಪ್ಪದೇ ಪಾಲನೆ ಮಾಡುತ್ತೇನೆ'' ಎಂದರು.
ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ''ಬಿಜೆಪಿಯವರಿಗೆ ಕಾಂಗ್ರೆಸ್ ಗ್ಯಾರಂಟಿ ಕುರಿತು ಮಾತನಾಡುವ ನೈತಿಕತೆ ಇಲ್ಲ. ಬಿಜೆಪಿಯವರು ಮೊದಲು ಜಾರಿ ಮಾಡಬಾರದು ಅಂದರು. ರಾಜ್ಯ ದಿವಾಳಿ ಆಗುತ್ತೆ ಎಂದು ಹೇಳುತ್ತಿದ್ದರು. ಇದೀಗ ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿ ಮಾಡಬೇಕು ಅಂತ ಪ್ರತಿಭಟನೆಗೆ ಮುಂದಾಗಿದ್ದಾರೆ. ಅವರ ವಿಚಾರಗಳಲ್ಲೇ ಅವರಿಗೆ ಸ್ಪಷ್ಟತೆಯಿಲ್ಲ. ಮೊದಲು ಅವರ ವಿಚಾರಗಳನ್ನು ಸರಿಪಡಿಸಿಕೊಂಡು ನಮ್ಮ ಬಗ್ಗೆ ಮಾತನಾಡಲಿ'' ಎಂದು ಬಿಜೆಪಿ ರಾಜ್ಯ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
''ಕ್ಷೇತ್ರದ ಜನರಿಗೆ ಮೊದಲಿನಷ್ಟು ಸಮಯ ಕೊಡುವುದಕ್ಕೆ ಆಗುತ್ತಿಲ್ಲ. ಏಕೆಂದರೆ, ಸಿಎಂ ಕ್ಷೇತ್ರವಾಗಿರುವುದರಿಂದ ಸಹಜವಾಗಿ ಮೊದಲಿಗಿಂತ ಹೆಚ್ಚು ಜನ ಭೇಟಿ ಮಾಡುತ್ತಾರೆ. ಜೊತೆಗೆ ಕ್ಷೇತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ಕೂಡ ಜನ ಭೇಟಿ ಮಾಡಲು ಬರುತ್ತಾರೆ. ಹಾಗಾಗಿ ಕ್ಷೇತ್ರದತ್ತ ಹೆಚ್ಚು ಸಮಯ ಕೊಡುವುದಕ್ಕೆ ಆಗುತ್ತಿಲ್ಲ ಜನರು ಅನ್ಯತಾ ಭಾವಿಸಬಾರದು. ಅವರ ಕುಂದು ಕೊರತೆಗಳನ್ನು ತಿಳಿದು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ'' ಎಂದು ಅವರು ಹೇಳಿದರು.
ಎಲ್ಲ ಯೋಜನೆಗಳನ್ನೂ ಜಾರಿಗೆ ತರುತ್ತೇವೆ- ಡಿಕೆಶಿ:ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ ಎಲ್ಲಾ ಯೋಜನೆಗಳನ್ನೂ ಜಾರಿಗೊಳಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ನಗರದ ಕುಮಾರಕೃಪಾ ಅತಿಥಿಗೃಹದ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾವು ಜನರಿಗೆ ಕೊಟ್ಟಿರುವ ಮಾತಿನಂತೆ ಅನ್ನಭಾಗ್ಯ ಯೋಜನೆ ಜಾರಿಗೊಳಿಸುತ್ತೇವೆ. ಸದ್ಯ 5 ಕೆಜಿ ಅಕ್ಕಿ ಮತ್ತು ಹೆಚ್ಚುವರಿ ಅಕ್ಕಿ ಸಿಗುವವರೆಗೂ ಅದಕ್ಕೆ ಪ್ರತಿಯಾಗಿ ದುಡ್ಡು ನೀಡುತಿದ್ದೇವೆ. ಅಕ್ಕಿ ಖರೀದಿಗೆ ನಮ್ಮ ಸಚಿವರು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಅಕ್ಕಿ ಸಿಗುವವರೆಗೂ ಬೇರೆ ಪಕ್ಷಗಳ ಸಲಹೆ ಅನ್ವಯ ಹಣ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಆರಂಭದಲ್ಲಿ ಹಣ ನೀಡಿ ಎಂದ ಹೇಳಿದ್ದ ಬಿಜೆಪಿ ನಾಯಕರು ಸದ್ಯ ಪೂರ್ಣ ಪ್ರಮಾಣದಲ್ಲಿ ಅಕ್ಕಿ ಕೊಡಿ ಎಂದು ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಇದರಿಂದ ಅವರ ಇಬ್ಬಗೆಯ ನೀತಿ ತಿಳಿತ್ತದೆೆ" ಎಂದು ಕಿಡಿಕಾರಿದರು.
ಇದನ್ನೂ ಓದಿ:ಯಾರಾಗ್ತಾರೆ ವಿಪಕ್ಷ ನಾಯಕ?: ಬಿಜೆಪಿ ಹೈಕಮಾಂಡ್ನಿಂದ ನಾಳೆ ಹೆಸರು ಘೋಷಣೆ ಸಾಧ್ಯತೆ