ಮೈಸೂರು:ಆತ ಹೆಂಗೆಂಗೋ ಆಡ್ತಾನೆ. ಆದರೆ, ಪಕ್ಷ ಬಿಡುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಬಿಜೆಪಿ ಶಾಸಕರು ಕಾಫಿ, ತಿಂಡಿಗೆ ಸೇರುವುದು ತಪ್ಪಲ್ಲ. ಕೊರೊನಾ ಲಾಕ್‌ಡೌನ್ ಕಾರಣದಿಂದ ಯಾರೂ ಪರಸ್ಪರ ಭೇಟಿಯಾಗಲು ಆಗಿರಲಿಲ್ಲ. ಬಹುದಿನಗಳ ನಂತರ ಎಲ್ಲರೂ ಕೂಡಿದ್ದಾರೆ. ಒಂದು ಕಡೆ ಕುಳಿತು ಊಟ ಮಾಡಿದ್ದಾರೆ. ಅದನ್ನೇ ಮಾಧ್ಯಮಗಳು ತಪ್ಪಾಗಿ ಅರ್ಥೈಸುತ್ತಿವೆ ಎಂದರು.
ಸಭೆ ಸೇರಿದ ಮಾತ್ರಕ್ಕೆ ಏನೋ ಆಗಿಬಿಡುವುದಿಲ್ಲ. ಉಮೇಶ್ ಕತ್ತಿ ನನ್ನ ಸ್ನೇಹಿತ. ಆತ ಹೆಂಗೆಂಗೋ ಆಡ್ತಾನೆ. ಆದರೆ, ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ತಿಳಿಸಿದರು.
ರಾಜ್ಯಸಭೆ, ವಿಧಾನ ಪರಿಷತ್ ಸದಸ್ಯತ್ವ ವಿಚಾರ ಮಾತನಾಡಿ, ನಮ್ಮ ಪಕ್ಷದ ಹೈಕಮಾಂಡ್ ಇದೆ. ಎಲ್ಲವನ್ನೂ ಅವರೇ ತೀರ್ಮಾನ ಮಾಡಲಿದೆ. ವಿಶ್ವನಾಥ್ ಆಯ್ಕೆ ವಿಚಾರವನ್ನೂ ಹೈಕಮಾಂಡ್ ತೀರ್ಮಾನ ಮಾಡಲಿದೆ. ನಾನು, ವಿಶ್ವನಾಥ್ ಅವರು ನಿನ್ನೆ ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿ ಮಾಡಿದ್ದೆವು ಎಂದರು.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಶ್ರೀನಿವಾಸ್ ಪ್ರಸಾದ್ ಅವರು ಹಿರಿಯರು. ನನಗೆ ಯೂತ್ ಕಾಂಗ್ರೆಸ್ ಕೋಟಾದಡಿ ಮೊದಲು ಟಿಕೆಟ್ ಕೊಟ್ಟಿದ್ದೇ ಅವರು. ನನ್ನ ರಾಜಕೀಯ ಪ್ರವೇಶಕ್ಕೆ ಅವರು ಕಾರಣಕರ್ತರು. ಆದ್ದರಿಂದ ಭೇಟಿ ಮಾಡಿ ಮಾತನಾಡಿದ್ದೇನೆ. ಅದರ ಹೊರತು ಬೇರೇನೂ ಇಲ್ಲ ಎಂದು ಹೇಳಿದರು.
ಕಾಮಗಾರಿ ವೀಕ್ಷಣೆ:ಸುತ್ತೂರಿನಲ್ಲಿ ₹ 233 ಕೋಟಿ ವೆಚ್ಚದ ಏತ ನೀರಾವರಿ ಯೋಜನೆಯ ಕಾಮಗಾರಿ ವೀಕ್ಷಿಸಿದರು. ಸುತ್ತೂರು ಬಳಿಯ ಕಬಿನಿ ನದಿಯಿಂದ ನಂಜನಗೂಡು, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ ತಾಲೂಕಿನ 24 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಸುತ್ತೂರಿನ ನದಿ ತೀರದಲ್ಲಿ ಪಂಪ್ಹೌಸ್ ನಿರ್ಮಾಣ ಮಾಡುತ್ತಿರುವ ಕಾಮಗಾರಿಯನ್ನು ರಮೇಶ್ ಜಾರಕಿಹೊಳಿ ಪರಿಶೀಲನೆ ನಡೆಸಿದರು.