ಮೈಸೂರು: ದಕ್ಷಿಣ ಚಿತ್ರರಂಗದ ಖ್ಯಾತ ನಿರ್ದೇಶಕ ಶಂಕರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಗೇಮ್ ಚೇಂಜರ್'. ಬ್ಲಾಕ್ಬಸ್ಟರ್ ಆರ್ಆರ್ಆರ್ ಬಳಿಕ ಬರುತ್ತಿರುವ ರಾಮ್ ಚರಣ್ ಅವರ ಬಹು ನಿರೀಕ್ಷಿತ ಚಿತ್ರವಿದು. ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಶೂಟಿಂಗ್ ಸಲುವಾಗಿ ಬಹುಬೇಡಿಕೆ ನಟ ರಾಮ್ ಚರಣ್ ಸೇರಿದಂತೆ ತಂಡ ಮೈಸೂರಿಗೆ ಆಗಮಿಸಿದೆ. ನಟ ರಾಮ್ಚರಣ್ ಇಂದು ಹೈದರಾಬಾದ್ನಿಂದ ಖಾಸಗಿ ಜೆಟ್ನಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ನಟನನ್ನು ಚಿತ್ರತಂಡ ಸ್ವಾಗತಿಸಿ, ಶೂಟಿಂಗ್ ಲೊಕೇಶನ್ಗೆ ಕರೆದುಕೊಂಡು ಹೋದರು.
ಸೌತ್ ಸ್ಟಾರ್ ಹೀರೋ ರಾಮ್ ಚರಣ್ ಹಾಗೂ ಕಿಯಾರಾ ಅಡ್ವಾಣಿ ಜೋಡಿಯಾಗಿ ನಟಿಸುತ್ತಿರುವ ಗೇಮ್ ಚೇಂಜರ್ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಇಂದು ಮಹಾರಾಜ ಕಾಲೇಜಿನಲ್ಲಿ ಚಿತ್ರೀಕರಣ ನಡೆಯಲಿದೆ. ಇನ್ನೂ ಎರಡು-ಮೂರು ದಿನಗಳ ಕಾಲ ಮೈಸೂರಿನ ವಿವಿಧ ಭಾಗಗಳಲ್ಲಿ ಶೂಟಿಂಗ್ ನಡೆಯಲಿದೆ. ರಾಮ್ ಚರಣ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಆದ್ರೆ ಚಿತ್ರೀಕರಣದ ಬಗ್ಗೆ ಚಿತ್ರತಂಡ ಗುಟ್ಟುಬಿಟ್ಟುಕೊಟ್ಟಿಲ್ಲ.
2022ರ ಮಾರ್ಚ್ನಲ್ಲಿ ತೆರೆಕಂಡ ಆರ್ಆರ್ಆರ್ ಅಭೂತಪೂರ್ವ ಯಶಸ್ಸು ಗಳಿಸಿತು. ನಿರೀಕ್ಷೆಗಳನ್ನೂ ಮೀರಿ, ಗಡಿ ದಾಟಿ, ಸಾಗರೋತ್ತರ ಪ್ರದೇಶಗಳಲ್ಲೂ ಸಖತ್ ಸದ್ದು ಮಾಡಿತು. ಸೂಪರ್ ಹಿಟ್ 'ನಾಟು ನಾಟು' ಹಾಡು ವಿಶ್ವದ ಪ್ರತಿಷ್ಠಿತ 'ಆಸ್ಕರ್' ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ಸು ಕಂಡಿತ್ತು. ಬಾಹುಬಲಿ ಖ್ಯಾತಿಯ ಎಸ್ ಎಸ್ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ. ವಿಶ್ವದ ಹಲವೆಡೆ ಸಂಚರಿಸಿ ಭಾರತೀಯ ಚಿತ್ರರಂಗದ ಕೀರ್ತಿ ಪತಾಕೆಯನ್ನು ಹಾರಿಸಿ ಬಂದಿದ್ದಾರೆ. ಆರ್ಆರ್ಆರ್ ಸಿನಿಮಾ ಬಳಿಕ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಜನಪ್ರಿಯತೆ ನೂರು ಪಟ್ಟು ಹೆಚ್ಚಾಗಿದೆ. ಈ ಹಿನ್ನೆಲೆ ಅವರ ಮುಂದಿನ ಸಿನಿಮಾಗಳ ಮೇಲೆ ಕುತೂಹಲ ಹೆಚ್ಚೇ ಇರುತ್ತದೆ.