ಮೈಸೂರು :ಗನ್ ಹೌಸ್ ವೃತ್ತದಲ್ಲಿ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆಯನ್ನು ರಾತ್ರೋರಾತ್ರಿ ಪ್ರತಿಷ್ಠಾಪಿಸಿರುವುದಕ್ಕೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಮೈಸೂರಿನ ಗನ್ ಹೌಸ್ ಬಳಿ ತಡರಾತ್ರಿ ಕ್ರೇನ್ ಉಪಯೋಗಿಸಿ ಪ್ರತಿಮೆಯನ್ನು ಸ್ಥಾಪಿಸಲು ಮುಂದಾಗಿರುವ ವಿಷಯ ಅತ್ಯಂತ ದುರದೃಷ್ಟ ಸಂಗತಿ. ಪ್ರಬುದ್ಧ ಸಂಸ್ಥೆಯಿಂದ ಇಂತಹ ಕೆಲಸ ಸಮಂಜಸವಲ್ಲ. ಉದ್ದೇಶಿತ ಪ್ರತಿಮೆಗೆ ಸತತವಾಗಿ ವಿರೋಧ ತೋರಿದ ಸಾರ್ವಜನಿಕರಿಗೆ ಸ್ಪಂದಿಸಿ, ಈ ಬಗ್ಗೆ ಪುನರ್ ವಿಮರ್ಶೆ ಮಾಡಲು ಮನವಿ ಕೂಡ ತಲುಪಿಸಿ ನನ್ನ ಬೆಂಬಲ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ನಗರದ ಗನ್ ಹೌಸ್ ಬಳಿಯ ವೃತ್ತದಲ್ಲಿ ರಾತ್ರೋರಾತ್ರಿ ರಾಜೇಂದ್ರ ಶ್ರೀಗಳ ಪ್ರತಿಮೆಯನ್ನಿಟ್ಟು ಶ್ರೀಗಳಿಗೆ ಅಪಮಾನಿಸಲಾಗಿದೆ. ಹೀಗಾಗಿ ಇದರ ವಿರುದ್ಧ ಕಾನೂನು ಹೋರಾಟ ಮುಂದುವರಿಸುವುದಾಗಿ ಅರಸು ಮಂಡಳಿ ತಿಳಿಸಿದೆ. ಈ ಕುರಿತು ಶನಿವಾರ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಮಂಡಳಿ ಪದಾಧಿಕಾರಿ ಅಮರನಾಥ ರಾಜೇ ಅರಸ್, ಮೈಸೂರು ಅರಮನೆ ಗನ್ ಹೌಸ್ ಬಳಿ ರಾತ್ರಿ ವೇಳೆ ಪ್ರತಿಮೆ ಇಟ್ಟಿದ್ದಾರೆ. ಶಿವರಾತ್ರಿ ಸ್ವಾಮೀಜಿ ಅವರ ಪುತ್ಥಳಿಯನ್ನು ರಾತ್ರಿಯ ವೇಳೆ ಕದ್ದು ಇರಿಸುವ ಮೂಲಕ ಅವರಿಗೆ ಅಪಮಾನ ಮಾಡಲಾಗಿದೆ. ಇದು ಜೆಎಸ್ಎಸ್ ಸಂಸ್ಥೆಗೆ ಮಾಡಿದ ಅಪಮಾನ ಎಂದು ಹೇಳಿದರು.