ಮೈಸೂರು :ಜಿಲ್ಲೆಯಲ್ಲಿ 3ನೇ ದಿನವಾದ ಇಂದು ಮಳೆಯ ಆರ್ಭಟ ಮುಂದುವರೆದಿದ್ದು, ಕಬಿನಿ ಪ್ರವಾಹದಿಂದ ನಂಜನಗೂಡು ಪಟ್ಟಣಕ್ಕೆ ನೀರು ನುಗ್ಗಿದ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜಿಲ್ಲೆಯ ಪ್ರಮುಖ ಜಲಾಶಯಗಳಾದ ಕಬಿನಿ, ನಗು, ತಾರಕ ಜಲಾಶಯಗಳ ವ್ಯಾಪ್ತಿಯಲ್ಲಿ ಧಾರಕಾರ ಮಳೆಯಾಗ್ತಿರೋದರಿಂದ ಕಪಿಲಾ ನದಿಗೆ 1.25 ಸಾವಿರ ಕ್ಯೂಸೆಟ್ ನೀರನ್ನು ನದಿ ಪಾತ್ರಕ್ಕೆ ಬಿಡಲಾಗಿದೆ.ಪರಿಣಾಮ ಹೆಚ್‌ಡಿಕೋಟೆ ತಾಲೂಕು, ಸರಗೂರು ತಾಲೂಕು, ನಂಜನಗೂಡು ತಾಲೂಕಿನಲ್ಲಿ ಬರುವ ಸುಮಾರು 20ಕ್ಕೂ ಅಧಿಕ ಸೇತುವೆಗಳು ಮುಳುಗಡೆಗೊಂಡಿದ್ದು, ಹಲವು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ.
ಜಿಲ್ಲೆಯಲ್ಲಿ ವರುಣನ ಆರ್ಭಟ.. ದೃಶ್ಯ ಡ್ರೋನ್ನಲ್ಲಿ ಸೆರೆ.. ದಕ್ಷಿಣ ಕಾಶಿಗೂ ನುಗ್ಗಿದ ನದಿ ನೀರು:
ಕಪಿಲಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಟ್ಟ ಪರಿಣಾಮ ದಕ್ಷಿಣ ಕಾಶಿ ನಂಜನಗೂಡಿನ ಹಲವು ದೇವಾಲಯಗಳು ನೀರಿನಲ್ಲಿ ಮುಳುಗಿದ್ದು, ಪಟ್ಟಣಕ್ಕೆ ಕಪಿಲಾ ನದಿಯ ನೀರು ನುಗ್ಗಿದ ಈ ದೃಶ್ಯವನ್ನು ಛಾಯಾಗ್ರಾಹಕರು ತಮ್ಮ ದ್ರೋಣ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇದರ ಜೊತೆಗೆ ಸುತ್ತೂರು ಸೇತುವೆ ಮುಳುಗಡೆಯಾಗಿದ್ದು, ಸುತ್ತೂರು ಧಾರ್ಮಿಕ ಕ್ಷೇತ್ರ ಜಿಲ್ಲೆಯಿಂದ ಸಂಪರ್ಕ ಕಡಿದುಕೊಂಡಿದೆ.
ಉಕ್ಕಿ ಹರಿಯುತ್ತಿರುವ ಲಕ್ಷ್ಮಣ ತೀರ್ಥ:
ಮಡಿಕೇರಿಯಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಲಕ್ಷ್ಮಣ ತೀರ್ಥ ನದಿಯು ಉಕ್ಕಿ ಹರಿಯಿತ್ತಿದೆ. ಹುಣಸೂರು ತಾಲೂಕಿನ ಹಲವಾರು ಗ್ರಾಮಗಳಿಗೆ ನೀರು ನುಗ್ಗಿದ್ದು, ಹತ್ತಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿವೆ. ಅನಗೂಡು ಹೋಬಳಿ ಸಂಪರ್ಕ ಕಡಿತಗೊಂಡಿದ್ದು, ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ.
ರಕ್ಷಣಾ ತಂಡ ಹಾಗೂ ಅಗ್ನಿಶಾಮಕ ದಳದವರು ಹಲವರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದು, ಸಂತ್ರಸ್ತರನ್ನು ಪುರ್ನವಸತಿ ಕೇಂದ್ರದಲ್ಲಿ ಇರಿಸಲಾಗಿದೆ. ಈ ಹುಣಸೂರು ತಾಲೂಕಿನ ಪ್ರವಾಹ ಪೀಡಿತ ಸ್ಥಳಗಳಿಗೆ ಸಂಸದ ಪ್ರತಾಪ್ ಸಿಂಹ, ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಹಾಗೂ ಹಲವಾರು ಮುಖಂಡರು ಭೇಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ.