ಮೈಸೂರು:ಕೋವಿಡ್-19 ಆತಂಕದ ನಡುವೆ ಇಂದು ಸರಳ ಹಾಗೂ ಸಾಂಪ್ರದಾಯಿಕ ದಸರಾಗೆ ಚಾಮುಂಡಿ ಬೆಟ್ಟದಲ್ಲಿ ವಿಧ್ಯುಕ್ತ ಚಾಲನೆ ದೊರೆಯಲಿದೆ. ಅರಮನೆಯ ರಾಜವಂಶಸ್ಥರು ಚಿನ್ನದ ಸಿಂಹಾಸನಕ್ಕೆ ಪೂಜೆ ಸಲ್ಲಿಸುವ ಮೂಲಕ ಶರನ್ನವರಾತ್ರಿಗೆ ಚಾಲನೆ ನೀಡಲಿದ್ದಾರೆ.
ಇಂದು ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 7.45ರಿಂದ 8.15ರವರೆಗಿನ ಶುಭ ಲಗ್ನದಲ್ಲಿ ನಾಡಹಬ್ಬ ದಸರಾಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಪದ್ಮಶ್ರೀ ಪುರಸ್ಕೃತ ಡಾ. ಸಿ. ಎನ್. ಮಂಜುನಾಥ್ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಮಂತ್ರಿ ಮಂಡಲದ ಮೂವರು ಸಚಿವರು ಭಾಗವಹಿಸಲಿದ್ದು, ನಾಡ ಅಧಿದೇವತೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ.
ಆನಂತರ ಸಂಜೆ ಅರಮನೆಯ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಇದರ ಅಧ್ಯಕ್ಷತೆಯನ್ನು ಸಿಎಂ ಯಡಿಯೂರಪ್ಪನವರು ವಹಿಸಲಿದ್ದಾರೆ. ಆನಂತರ ನೃತ್ಯ ರೂಪಕ ಕಾರ್ಯಕ್ರಮ ನಡೆಯಲಿದ್ದು, ಅರಮನೆಯ ಮುಂಭಾಗದ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮದಲ್ಲಿ 8 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮಗಳನ್ನು ಆನ್ಲೈನ್ ಮೂಲಕ ವೀಕ್ಷಿಸಬಹುದಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ಇಲ್ಲ.
ಗಜಪಡೆ ತಾಲೀಮು:
ಈ ಬಾರಿ ಸರಳ ದಸರಾದಲ್ಲಿ ಅಭಿಮನ್ಯು, ವಿಕ್ರಮ, ವಿಜಯ, ಗೋಪಿ ಮತ್ತು ಕಾವೇರಿ ಆನೆಗಳು ಭಾಗವಹಿಸಲಿದ್ದು, ಚಿನ್ನದ ಅಂಬಾರಿಯನ್ನು ಮೊದಲ ಬಾರಿಗೆ ಅಭಿಮನ್ಯು ಆನೆ ಹೊರಲಿದ್ದಾನೆ. ಅರಮನೆ ಒಳಗಡೆ ಗಜಪಡೆ ತಾಲೀಮು ನಡೆಯುತ್ತಿದ್ದು, ಇದರ ಜೊತೆಗೆ ಕುಶಾಲತೋಪುಗಳ ತಾಲೀಮು ಹಾಗೂ ಅಶ್ವ ಪಡೆ ತಾಲೀಮು ಸಹ ನಡೆಯುತ್ತಿದೆ.