ಮೈಸೂರು: ಮೂರು ದಶಕಗಳ ಹಿಂದೆ ಬದನವಾಳು ಗ್ರಾಮದಲ್ಲಿ ನಡೆದ ಸಮುದಾಯಗಳ ಸಂಘರ್ಷ ಹತ್ಯಾಕಾಂಡಕ್ಕೆ ತಿರುಗಿತ್ತು. ಇಲ್ಲಿಯವರೆಗೂ ಅವರ ನಡುವಿನ ಅಂತರ ಮುಂದುವರೆದಿತ್ತು. ಆದ್ರೆ ರಾಹುಲ್ ಗಾಂಧಿ ಅವರು ಆ ಎರಡೂ ಸಮುದಾಯಗಳೊಂದಿಗೆ ಸಹ ಭೋಜನ ಸವಿದು, ಮುರಿದಿದ್ದ ಮನಸುಗಳನ್ನು ಜೋಡಿಸಿದ್ದಾರೆ. ಇದು ಭಾರತ್ ಜೋಡೋ ಯಾತ್ರೆಯ ಸಾರ್ಥಕತೆ ಎಂದು ಕಾಂಗ್ರೆಸ್ ತಿಳಿಸಿದೆ.
ರಾಹುಲ್ ಗಾಂಧಿ ಅವರ ಮುಖಂಡತ್ವದಲ್ಲಿ ಗಾಂಧಿ ಜಯಂತಿಯ ದಿನ ಬದನವಾಳು ಗ್ರಾಮದಲ್ಲಿ ಸಹ ಭೋಜನದ ಮೂಲಕ ಎರಡು ಸಮುದಾಯಗಳ ಮನಸ್ಸುಗಳನ್ನು 29 ವರ್ಷಗಳ ಬಳಿಕ ತಿಳಿಗೊಳಿಸಲಾಗಿದೆ. ಭಾರತ್ ಜೋಡೋ ಈಗ ಭಾರತದ ಐಕ್ಯತಾ ಯಾತ್ರೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.
ಬದನವಾಳುವಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಬದನವಾಳು ಗ್ರಾಮದಲ್ಲಿ ಗಾಂಧಿ ಭಾವಚಿತ್ರಕ್ಕೆ ರಾಹುಲ್ ಗಾಂಧಿ ಪುಷ್ಪಾರ್ಚನೆ ಸಲ್ಲಿಸಿ, ನಂತರ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಬಳಿಕ ಗ್ರಾಮದಲ್ಲಿ ಶ್ರಮದಾನ ನೆರವೇರಿಸಿ, ಗ್ರಾಮದ ಹಳೆ ಮನೆಗಳಿಗೆ ಬಣ್ಣ ಬಳಿಯುವ ಮೂಲಕ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡಿದರು ಎಂದರು.