ಮೈಸೂರು: ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರಕ್ಕೆ ಸಂಸದ ರಾಹುಲ್ ಗಾಂಧಿ ಒತ್ತಡ ಹೇರುವುದು ಸರಿಯಲ್ಲ ಎಂದು ಅರಣ್ಯ ಸಚಿವ ಸಿ ಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಮೈಸೂರು ಮೃಗಾಲಯದಲ್ಲಿ ಸಿಂಗಾಪುರದಿಂದ ಆಗಮಿಸಿದ್ದ ಬಿಳಿ ಘೇಂಡಾಮೃಗವನ್ನು ಪ್ರವಾಸಿಗರಿಗೆ ನೋಡಲು ಮುಕ್ತಗೊಳಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಾಣಿಗಳ ರಕ್ಷಣೆ ಹಾಗೂ ಪ್ರಾಣಿಗಳು ಸ್ವಚ್ಛಂದವಾಗಿ ಸಂಚಾರ ಮಾಡಲು ನಾವು ಯಾವುದೇ ಅಡಚಡಣೆ ಮಾಡಬಾರದು ಎಂದರು.
ಕೇರಳದಲ್ಲಿ ರಾತ್ರಿ ಸಂಚಾರವನ್ನು ಬಂಡೀಪುರದ ಭಾಗದಿಂದ ಮುಕ್ತಗೊಳಿಸುವಂತೆ ಒತ್ತಡ ಹೇರುತ್ತಿರುವುದರ ಜೊತೆಗೆ ಕೇರಳದವರ ಪರವಾಗಿ ರಾಹುಲ್ ಗಾಂಧಿ ಮಾತನಾಡಿದ್ದು ಸರಿಯಲ್ಲ. ಯಾಕೆಂದರೆ, ಪ್ರಾಣಿಗಳಿಗೂ ವೈಯಕ್ತಿಕ ಬದುಕು ಇರುತ್ತದೆ. ಬಂಡೀಪುರ ಭಾಗದಲ್ಲಿ ಪ್ರಾಣಿಗಳು ಹೆಚ್ಚು ಇದ್ದು ಅವುಗಳ ರಾತ್ರಿ ಓಡಾಟ ಹೆಚ್ಚಾಗಿರುವ ಕಾರಣ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡುವುದು ಸರಿಯಲ್ಲ ಎಂದರು.
ರಾಹುಲ್ ಗಾಂಧಿ ಒಂದು ಕ್ಷೇತ್ರದ ಸಂಸದರಾಗಿ ಯೋಚನೆ ಮಾಡುವುದುಕ್ಕಿಂತ ಕಾಂಗ್ರೆಸ್ನ ಮಾಜಿ ರಾಷ್ಟ್ರೀಯ ಅಧ್ಯಕ್ಷನಾಗಿ ಯೋಚಿಸುವುದು ಒಳ್ಳೆಯದು. ಅಲ್ಲದೇ ಬಂಡಿಪುರ ಪ್ರದೇಶದಲ್ಲಿ ರಾತ್ರಿ ಸಂಚಾರಕ್ಕೆ ಕೋರ್ಟ್ ಕೂಡ ಅನುಮತಿ ನೀಡಿಲ್ಲ ಎಂದು ಅರಣ್ಯ ಸಚಿವ ಸಿ ಸಿ ಪಾಟೀಲ್ ಹೇಳಿದರು.