ಮೈಸೂರು: ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಭೇಟಿ ನೀಡಿ, ದೇವಿಯ ದರ್ಶನ ಪಡೆದರು. ಇನ್ನೊಂದೆಡೆ, ಟಾಲಿವುಡ್ ನಟ ರಾಮ್ ಚರಣ್ ತೇಜ ಕೂಡ ವಾರಾಂತ್ಯದ ಮುಂಜಾನೆ ಚಾಮುಂಡೇಶ್ವರಿಯ ದರ್ಶನ ಪಡೆದರು.
ಚಾಮುಂಡಿ ಬೆಟ್ಟಕ್ಕೆ ನಟ ರಾಮ್ ಚರಣ್ ತೇಜ ತಮ್ಮ 'ಗೇಮ್ ಚೇಂಜರ್' ಚಿತ್ರತಂಡದೊಂದಿಗೆ ದೇವಾಲಯಕ್ಕೆ ಆಗಮಿಸಿದ್ದರು. ಭಾನುವಾರ ಮುಂಜಾನೆ ಚಾಮುಂಡೇಶ್ವರಿಯ ದರ್ಶನ ಪಡೆದರು. ರಾಮ್ ಚರಣ್ ತೇಜ ತಮ್ಮ ಮುಂದಿನ ಚಿತ್ರ ಗೇಮ್ ಚೇಂಜರ್ ಶೂಟಿಂಗ್‌ಗಾಗಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ.
ತಮ್ಮ ಪುತ್ರನ ಕ್ರಿಕೆಟ್ ಆಟ ಕಣ್ತುಂಬಿಕೊಳ್ಳಲು ಮೈಸೂರಿಗೆ ಆಗಮಿಸಿರುವ ರಾಹುಲ್ ದ್ರಾವಿಡ್ ಕೂಡ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಕೋಚ್ ರಾಹುಲ್ ದ್ರಾವಿಡ್ ತಮ್ಮ ಪತ್ನಿ ವಿಜೇತಾ ಅವರ ಜೊತೆ ಚಾಮುಂಡೇಶ್ವರಿ ದರ್ಶನ ಪಡೆದರು.
ಮಗನ ಆಟ ವೀಕ್ಷಣೆಗೆ ಮೈಸೂರಿಗೆ ಬಂದ ದ್ರಾವಿಡ್:ಮೈಸೂರಿನ ಮಾನಸಗಂಗೋತ್ರಿ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ಉತ್ತರಾಖಂಡ ನಡುವೆ 19 ವರ್ಷದೊಳಗಿನ ಕೂಚ್ ಬೆಹರ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ. ಇದರಲ್ಲಿ ದ್ರಾವಿಡ್ ಅವರ ಮಗ ಆಡುತ್ತಿದ್ದಾರೆ. ಅವರ ಆಟವನ್ನು ನೋಡಲು ರಾಹುಲ್ ದ್ರಾವಿಡ್ ದಂಪತಿ ಮೈಸೂರಿಗೆ ಆಗಮಿಸಿದ್ದರು.
ಕೋಚ್ ಹುದ್ದೆಯಲ್ಲಿ ಮುಂದಿವರೆದ ದ್ರಾವಿಡ್:ಕಳೆದ 2021ರ ನವೆಂಬರ್ ತಿಂಗಳಲ್ಲಿ ಬಿಸಿಸಿಐ ದ್ರಾವಿಡ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ 2 ವರ್ಷದ ಅವಧಿಗೆ ಬಿಸಿಸಿಐ ನೇಮಕ ಮಾಡಿತ್ತು. 2023ರ ಏಕದಿನ ವಿಶ್ವಕಪ್ ವರಗೆ ರಾಹುಲ್ ದ್ರಾವಿಡ್ ಅವರು ಭಾರತದ ಪುರುಷರ ತಂಡದ ಕೋಚ್ ಆಗಿದ್ದರು. ವಿಶ್ವಕಪ್ನಲ್ಲಿ ಭಾರತ ರನ್ನರ್ ಅಪ್ ಆದ ನಂತರ ಅವರು ಹುದ್ದೆಯಿಂದ ಇಳಿಯುತ್ತಾರೆ ಎಂದು ಹೇಳಲಾಗಿತ್ತು. ಆದರೆ ಬಿಸಿಸಿಐ ಅವರ ಗುತ್ತಿಗೆಯನ್ನು ಮುಂದುವರೆಸಿದೆ.
ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಮತ್ತೆ ಕೋಚ್ ಹುದ್ದೆಗೆ:ಏಕದಿನ ವಿಶ್ವಕಪ್ ಮುಗಿದ ಬೆನ್ನಲ್ಲೇ ಆರಂಭವಾದ ಆಸ್ಟ್ರೇಲಿಯಾ ವಿರುದ್ಧದ 5 ಟಿ20 ಪಂದ್ಯಗಳ ಸರಣಿಯಿಂದ ದ್ರಾವಿಡ್ ದೂರ ಉಳಿದಿದ್ದಾರೆ. ದ್ರಾವಿಡ್ ಅನಿಪಸ್ಥಿತಿಯಲ್ಲಿ ವಿವಿಎಸ್ ಲಕ್ಷ್ಮಣ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಿಸೆಂಬರ್ ಮತ್ತು ಜನವರಿಯಲ್ಲಿ ಭಾರತ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದ್ದು ಅಲ್ಲಿ 3 ಟಿ20, 3 ಏಕದಿನ ಮ ತ್ತು 1 ಟೆಸ್ಟ್ ಪಂದ್ಯವನ್ನು ಆಡಲಿದೆ. ಈ ಸರಣಿಯಲ್ಲಿ ಪುನಃ ದ್ರಾವಿಡ್ ಕೋಚ್ ಹುದ್ದೆಗೆ ಮರಳಲಿದ್ದಾರೆ.
ಇದನ್ನೂ ಓದಿ:ಕೋಚ್ ಹುದ್ದೆ ವಿಸ್ತರಿತ ಅವಧಿ ಎಷ್ಟು?: ರಾಹುಲ್ ದ್ರಾವಿಡ್ ನೀಡಿದ ಮಾಹಿತಿ ಇದು!