ಮೈಸೂರು: ಕರ್ನಾಟಕವನ್ನು ಕಮಿಷನ್ ಕರ್ನಾಟಕ ಹಾಗೂ ಕಮ್ಯುನಲ್ ಕರ್ನಾಟಕ ಮಾಡಿದ್ದೇ ಬಿಜೆಪಿಯ ಒಂದು ವರ್ಷದ ಸಾಧನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಟೀಕಿಸಿದ್ದಾರೆ. ನಗರದ ಪತ್ರಕರ್ತರ ಭವನದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ದೇಶದಲ್ಲೇ ನಂಬರ್ ಒನ್ ಭ್ರಷ್ಟ ಸರ್ಕಾರ ಆಗಿದ್ದು, ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷದಲ್ಲಿ ಜನಪರ ಸರ್ಕಾರ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
40 ಪರ್ಸೆಂಟ್ ಸರ್ಕಾರ ಎಂಬ ಕುಖ್ಯಾತಿ ಪಡೆದು, ಒಂದು ವರ್ಷದಲ್ಲಿ ರಾಜ್ಯವನ್ನು ಲೂಟಿ ಮಾಡಿದ್ದು, ರಾಜ್ಯದಲ್ಲಿ ಕೋಮು ವಿಷ ಬೀಜವನ್ನು ಬಿತ್ತಿರುವುದು ಬಸವರಾಜ ಬೊಮ್ಮಾಯಿ ಅವರ ಸಾಧನೆಯಾಗಿದೆ. ಅವರ ಕಾಲದಲ್ಲಿ ಪಿಎಸ್ಐ ಹಗರಣ, ಉಪನ್ಯಾಸಕರ ನೇಮಕಾತಿಯಲ್ಲಿ ಹಗರಣ, ಬಳಕೆಯಾಗದ ಅನುದಾನ, ಅಭಿವೃದ್ಧಿ ಕುಂಠಿತ, ಕೇಂದ್ರ ಸರ್ಕಾರದಿಂದ ಸರಿಯಾದ ಸಮಯಕ್ಕೆ ಬಾರದ ಅನುದಾನದ ಹಣ, ಮಳೆ ಪರಿಹಾರ ನೀಡುವಲ್ಲಿ ವಿಫಲ. ಕ್ರಿಮಿನಲ್ಗಳ ಮೇಲಿದ್ದ ಪ್ರಕರಣಗಳನ್ನು ವಾಪಸ್ ಪಡೆದಿದ್ದು, ಸಂಘ-ಪರಿವಾರಗಳಿಗೆ ಸರ್ಕಾರಿ ಭೂಮಿಯನ್ನು ನೀಡಿದ್ದು ಹಾಗೂ ಸರ್ಕಾರದ ವಿರುದ್ಧ ಮಾತನಾಡುವವರ ವಿರುದ್ಧ ಕೇಸ್ ಹಾಕಿದ್ದು ಇದೇ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಲ್ಯಾಣ ಕರ್ನಾಟಕವನ್ನು ಮಾಡುವ ಬದಲು ಕಮಿಷನ್ ಸರ್ಕಾರವನ್ನು ಹಾಗೂ ಕಮ್ಯುನಲ್ ಕರ್ನಾಟಕವನ್ನು ಮಾಡಿದ್ದೇ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಾಧನೆಯಾಗಿದ್ದು, ಇದನ್ನು ಹೇಳಲು ಜನೋತ್ಸವ ಕಾರ್ಯಕ್ರಮ ಏಕೆ ಬೇಕಿತ್ತು ಎಂದು ಧ್ರುವನಾರಾಯಣ್ ಟೀಕಿಸಿದರು.