ಮೈಸೂರು :ರಾಜ್ಯ ಸರ್ಕಾರ ಕೊರೊನಾ ರೋಗಿಗಳಿಗಾಗಿ ಖರ್ಚು ಮಾಡುತ್ತಿರುವ ಲೆಕ್ಕವನ್ನ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮನೆ ಬಾಗಿಲಿಗೆ ಕಳುಹಿಸುತ್ತೀವಿ ಎಂದು ಕಂದಾಯ ಸಚಿವ ಆರ್ ಅಶೋಕ್ ವ್ಯಂಗ್ಯವಾಡಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್.ಅಶೋಕ್, ಕೊರೊನಾ ಸಂದರ್ಭದಲ್ಲಿ ಕಾಂಗ್ರೆಸ್ ಅನಗತ್ಯ ರಾಜಕೀಯ ಮಾಡುತ್ತಿದೆ. ಕೊರೊನಾ ಕುರಿತಾದ ಲೆಕ್ಕ ಕೊಡಿ ಎಂದು ಸಿದ್ದರಾಮಯ್ಯನವರು ಕೇಳ ಬೇಕಿಲ್ಲ. ಕೋವಿಡ್ ಲೆಕ್ಕವನ್ನು ಸಿದ್ದರಾಮಯ್ಯನವರ ಮನೆ ಬಾಗಿಲಿಗೆ ತಲುಪಿಸುತ್ತೇವೆ. ಪ್ರತಿಯೊಬ್ಬ ಸಾರ್ವಜನಿಕರಿಗೂ ಲೆಕ್ಕ ಸಿಗಲಿದೆ ಎಂದರು. ಕೋವಿಡ್-19 ಲೆಕ್ಕದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಭ್ರಷ್ಟಾಚಾರ ನಡೆಯೋದಕ್ಕೆ ಇದು ಕಾಂಗ್ರೆಸ್ ಸರ್ಕಾರ ಅಲ್ಲ, ಕಾಂಗ್ರೆಸ್ ಸರ್ಕಾರ ಇದ್ದಾಗ ಎಷ್ಟು ಭ್ರಷ್ಟಾಚಾರ ನಡೆದಿದೆ ಅಂತಾ ಇಡೀ ದೇಶಕ್ಕೆ ಗೊತ್ತು ಎಂದು ಕಾಲೆಳೆದರು.
ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ಮೋದಿ ಯಾವುದೇ ಕಳಂಕವಿಲ್ಲದೇ ಅಧಿಕಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಈವರೆಗೆ 400 ರಿಂದ 500 ಕೋಟಿ ರೂ. ಮಾತ್ರ ಖರ್ಚಾಗಿದೆ. 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆಯಲು ಹೇಗೆ ಸಾಧ್ಯ?. ಕೋವಿಡ್ ಸಮರದಲ್ಲಿ ವಿಪಕ್ಷಗಳು ಸಹಕಾರ ಕೊಡುತ್ತಿಲ್ಲ ಎಂದು ದೂರಿದರು. ಹಾಸಿಗೆ-ದಿಂಬು ಅವ್ಯವಹಾರ ನಡೆದಿದೆ ಎಂದು ಡಿಕೆಶಿ ಆರೋಪಕ್ಕೆ ತಿರುಗೇಟು ನೀಡಿದ ಆರ್.ಅಶೋಕ್, ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವೈರಸ್ ಹರಡುವಿಕೆ ನಿಯಂತ್ರಿಸಲು ಶಕ್ತಿ ಮೀರಿ ಶ್ರಮಿಸುತ್ತಿದ್ದೇವೆ.
ರಾಜ್ಯಾದ್ಯಂತ ಕೊರೊನಾ ಕೇಸ್‌ಗಳು ಜಾಸ್ತಿ ಆಗುತ್ತಿದ್ದು, ಕೊರೊನಾ ನಿಯಂತ್ರಣದ ಬಗ್ಗೆ ಪ್ರತಿಪಕ್ಷಗಳು ಸರ್ಕಾರಕ್ಕೆ ಸಲಹೆ ನೀಡಲಿ, ಇಂತಹ ಸಂದರ್ಭಗಳಲ್ಲಿ ರಾಜಕೀಯ ಬೇಡ ಎಂದರು. ಕೊರೊನಾ ವಿಷಯದಲ್ಲಿ ಬೆಂಗಳೂರು ಪರಿಸ್ಥಿತಿ ನಿಯಂತ್ರಣ ತಪ್ಪಿದೆ. ಹಾಗಾಗಿಯೇ ಒಂದು ವಾರ ಲಾಕ್‌ಡೌನ್ ಜಾರಿ ಮಾಡಿದ್ದೇವೆ. ಲಾಕ್‌ಡೌನ್ ಮಾಡುವುದು ಮುಖ್ಯವಲ್ಲ, ಅದರಿಂದ ವೈರಸ್ ಹರಡುವ ವೇಗಕ್ಕೆ ಎಷ್ಟರ ಮಟ್ಟಿಗೆ ತಡೆ ಹಾಕುತ್ತೇವೆ ಎಂಬುದು ಮುಖ್ಯ ಎಂದು ಹೇಳಿದರು. ಇನ್ನು, ಮೈಸೂರು ಲಾಕ್‌ಡೌನ್ ವಿಚಾರ ಜಿಲ್ಲಾಧಿಕಾರಿಗಳ ಪರಮಾಧಿಕಾರಕ್ಕೆ ಬಿಟ್ಟದ್ದು, ಮೈಸೂರಿನಲ್ಲೂ ಕೊರೊನಾ ಕೇಸ್ ಹೆಚ್ಚಾಗಿವೆ.
ಜಿಲ್ಲೆಗಳ ಪರಿಸ್ಥಿತಿ ಬಗ್ಗೆ ಮಂಗಳವಾರ ಸಿಎಂ ವಿಡಿಯೋ ಸಂವಾದ ನಡೆಸಿದ್ದಾರೆ. ಲಾಕ್‌ಡೌನ್ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದ್ದು, ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲು ಡಿಸಿಗಳಿಗೆ ಆದೇಶ ನೀಡಿದ್ದೇವೆ. ಇಲ್ಲಿನ ಪರಿಸ್ಥಿತಿ ನೋಡಿ ಜಿಲ್ಲಾಧಿಕಾರಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡುವ ಮುನ್ನ ಶಾಸಕರು ಹಾಗೂ ಅಧಿಕಾರಿಗಳ ಜೊತೆ ಸಚಿವ ಆರ್.ಅಶೋಕ್ ಸಭೆ ನಡೆಸಿದರು.