ಮೈಸೂರು:ಸಾಂಸ್ಕೃತಿಕ ನಗರಿಯ ವಿಶ್ವ ವಿಖ್ಯಾತ ನಾಡಹಬ್ಬ ದಸರಾದ ಪ್ರವಾಸಿಗರನ್ನು ಸೆಳೆಯುವ ಅತ್ಯಾಕರ್ಷಣೆಯ ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಕಂದಾಯ ಸಚಿವ ಆರ್. ಅಶೋಕ್ ಚಾಲನೆ ನೀಡಿದರು.
ಜಗಮಗಿಸುವ ಮೈಸೂರು ದಸರಾ ದೀಪಾಲಂಕಾರಕ್ಕೆ ಚಾಲನೆ - ವಿದ್ಯುತ್ ದೀಪಾಲಂಕಾರ
ನಾಡಹಬ್ಬ ದಸರಾ ಸಂಭ್ರಮಕ್ಕೆ ಸಾಂಸ್ಕೃತಿಕ ನಗರಿ, ಅರಮನೆ ನಗರಿ ಮೈಸೂರು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ನಗರದ ಜಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಚಿತ್ತಾಕರ್ಷಣೆಯ ದಸರಾ ದೀಪಾಲಂಕಾರಕ್ಕೆ ಕಂದಾಯ ಸಚಿವ ಆರ್. ಅಶೋಕ್ ಅವರು ಚಾಲನೆ ನೀಡಿದರು.
ನ್ಯೂ ಸಯ್ಯಾಜಿ ರಾವ್ ರಸ್ತೆಯಲ್ಲಿರುವ ವಿದ್ಯುತ್ ಹಸಿರು ಮಂಟಪ ಆವರಣದಲ್ಲಿ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಮೈಸೂರು ಸಾಂಸ್ಕೃತಿಕ ಪರಂಪರೆಯ ನಗರ. ದಸರಾ ವೀಕ್ಷಿಸಲು ಮೈಸೂರಿಗೆ ದೇಶ- ವಿದೇಶದಿಂದ ಬರುವ ಪ್ರವಾಸಿಗರಿಗೆ ದೀಪಾಲಂಕಾರ ಸಂತೋಷವನ್ನುಂಟು ಮಾಡುತ್ತದೆ. ಕಳೆದ ಬಾರಿಗಿಂತ ಈ ಬಾರಿ ಸುಮಾರು 75 ಕಿ.ಮೀ. ಹಾಗೂ 91 ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. 12 ವಿವಿಧ ರೀತಿಯ ವಿಶೇಷ ಪ್ರತಿಕೃತಿಗಳನ್ನು ನಿರ್ಮಾಣ ಮಾಡಲಾಗಿದೆ. ಅದರಲ್ಲೂ ಪಶ್ಚಿಮ ಬಂಗಾಳದ ದುರ್ಗಾ ದೇವಿಯ ಪೂಜೆಯ ಮಾದರಿಯ ಪ್ರತಿಕೃತಿಯನ್ನು 5 ಕಡೆಗಳಲ್ಲಿ ಹಾಕಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಕೋಲಾರ ಸಂಸದ ಮುನಿಸ್ವಾಮಿ, ಶಾಸಕರಾದ ರಾಮದಾಸ್, ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.