ಮೈಸೂರು: ಸಂಸದ ಪ್ರತಾಪ್ ಸಿಂಹ ಸಿಡಿ ವಿವಾದ ಕುರಿತು ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಲೇವಡಿ ಮಾಡಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಅವರಿಗೆ ಸಿದ್ದರಾಮಯ್ಯ ಆಹಾರ ಪದ್ಧತಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
ಜನರಿಗೆ ತಮ್ಮದೇ ಆದ ಆಚಾರ, ವಿಚಾರ, ಸಂಸ್ಕೃತಿ, ವೈವಿಧ್ಯತೆಗಳು, ಆಹಾರ ಪದ್ಧತಿ ಇರುತ್ತವೆ. ಮಾಂಸಹಾರಿಗಳು ಅಥವಾ ಸಸ್ಯಹಾರಿಗಳು ತಮ್ಮ ಶ್ರದ್ಧೆ, ಸಂಪ್ರದಾಯ, ಆಚರಣೆಗಳ ಅನುಸಾರ ದೇವರ ಪೂಜೆ ಮಾಡುತ್ತಾರೆ. ಇದನ್ನು ಪ್ರಶ್ನಿಸಲು ಪ್ರತಾಪ್ ಸಿಂಹ ಯಾರು? ಅವರಿಗೆ ಯಾವ ನೈತಿಕತೆ ಇದೆ. ದೇವರು, ಧರ್ಮದ ತಮ್ಮ ಬೂಟಾಟಿಕೆ ಪ್ರದರ್ಶನ ಮಾಡುವುದನ್ನು ನಿಲ್ಲಿಸಬೇಕು ಎಂದು ಕಿಡಿಕಾರಿದರು.
ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ವರ್ಚಸ್ಸು ಸಹಿಸಲಾಗ್ತಿಲ್ಲ:ಕೊಡಗಿನವರು ವೀರರು, ಶೂರರು. ಆದರೆ ಸಿದ್ಧರಾಮಯ್ಯ ವರ್ಚಸ್ಸು ಸಹಿಸಿಕೊಳ್ಳಲಾಗದ ಬಿಜೆಪಿ ಮುಖಂಡರು ತಮ್ಮ ರಣಹೇಡಿ ಕಾರ್ಯಕರ್ತರ ಮೂಲಕ ಮೊಟ್ಟೆ ಎಸೆದಿದ್ದಾರೆ. ಮೈಸೂರಿಗೆ ಆಗಮಿಸಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೂ ನಾವು ಮೊಟ್ಟೆ ಎಸೆದು ಕಪ್ಪು ಬಾವುಟ ತೋರಿಸಬಹುದಿತ್ತು. ಆದರೆ, ಬಿಎಸ್‍ವೈ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಅವರಿಗೆ ಮೊಟ್ಟೆ ಎಸೆದು ಕಪ್ಪು ಬಾವುಟ ಪ್ರದರ್ಶಿಸುವುದು ಕಾಂಗ್ರೆಸ್ ಸಂಸ್ಕೃತಿಯಲ್ಲ ಎಂದರು.