ಮೈಸೂರು:ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕೆಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಆದೇಶಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಹಾಗೂ ದೈಹಿಕ ಅಂತರ ಕಾಪಾಡುವುದನ್ನು ಕಡ್ಡಾಯವಾಗಿ ಪಾಲಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿಯೂ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದ್ದು, ಜನರು ಈ ಸಾಂಕ್ರಾಮಿಕವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ಲಕ್ಷಿಸದೆ, ನಿಯಮಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಯಾವುದೇ ಜ್ವರ, ಕೆಮ್ಮು, ಶೀತ, ತಲೆನೋವಿನಂತಹ ಕೋವಿಡ್-19 ರೋಗದ ಗುಣಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಇದಲ್ಲದೆ 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಹಾಗೂ ಯಾವುದಾದರೂ ದೀರ್ಘಕಾಲಿನ ಕಾಯಿಲೆಗಳಿಂದ (comorbidities) ಬಳಲುತ್ತಿರುವ 45 ರಿಂದ 60 ವರ್ಷ ವಯೋಮಾನದವರು ಕಡ್ಡಾಯವಾಗಿ ಲಸಿಕೆಯನ್ನು ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ, ದೇವಸ್ಥಾನಗಳಿಗೆ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಕೋವಿಡ್-19 ಹರಡದಂತೆ ತಡೆಗಟ್ಟಲು ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಜಾರಿ ಮಾಡಿರುವ ಹೊಸ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಪ್ರಕರಣ.. ವಿಚಾರಣೆಗೆ ಹಾಜರಾದ ಕಾರ್ಯಕರ್ತರು