ಮೈಸೂರು: ಭ್ರಷ್ಟಾಚಾರದಲ್ಲಿ ಮುಳುಗಿರುವ ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅವರ ಭಾವಚಿತ್ರವಿಟ್ಟು ಅಣಕು ಶವಯಾತ್ರೆ ಮೂಲಕ ದಲಿತ ಸಂಘರ್ಷ ಸಮಿತಿಯು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇಂದು ಪ್ರತಿಭಟನೆ ನಡೆಸಿತು.
ಅರಮನೆ ಮಂಡಳಿ ಉಪನಿರ್ದೇಶಕನ ವಿರುದ್ಧ ಅಣಕು ಶವಯಾತ್ರೆ ಪ್ರತಿಭಟನೆ
ಅರಮನೆ ಮಂಡಳಿಯಲ್ಲಿ ಭಾರಿ ಅಕ್ರಮ ಎಸಗಿರುವ ಉಪನಿರ್ದೇಶಕನ ಟಿ.ಎಸ್.ಸುಬ್ರಹ್ಮಣ್ಯ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಅವರ ಭಾವಚಿತ್ರವಿಟ್ಟು ಅಣಕು ಶವಯಾತ್ರೆ ನಡೆಸಿತು.
ಅರಮನೆ ಮಂಡಳಿಯಲ್ಲಿ 10 ವರ್ಷಗಳಿಂದ ಉಪನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಟಿ.ಎಸ್.ಸುಬ್ರಹ್ಮಣ್ಯ ಭಾರಿ ಅಕ್ರಮ ಎಸಗಿದ್ದಾರೆ. ಈ ಅಕ್ರಮ ಅವ್ಯವಹಾರಗಳ ದಾಖಲಾತಿಗಳ ಸಾಕ್ಷಿ ನಾಶದ ಬಗ್ಗೆ ತನಿಖೆ ನಡೆಸಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಜಿಲ್ಲಾಡಳಿತಕ್ಕೆ ಈಗಾಗಲೇ ದಾಖಲೆಗಳ ಸಮೇತ ಸಾಕಷ್ಟು ಬಾರಿ ಪತ್ರ ಬರೆಯಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.
ಜಿಲ್ಲಾಧಿಕಾರಿಗಳು ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಹೇಳಿದ್ದರು. ಆದರೆ, ಈವರೆಗೆ ಯಾವುದೇ ತನಿಖೆ ಮಾಡಲು ಮುಂದಾಗಿಲ್ಲ. ಈ ಮೂಲಕ ಜಿಲ್ಲಾಡಳಿತ ಮಾತು ತಪ್ಪಿದೆ ಎಂದು ದಲಿತ ಸಂಘರ್ಷ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ.