ಮೈಸೂರು: ಕಾವೇರಿ, ಕಪಿಲಾ ನದಿಗಳು ಹರಿಯುವ ಜಿಲ್ಲೆ ಮೈಸೂರು ಆಗಿದ್ದು, ಇಲ್ಲಿ ನೀರಿನ ಲಭ್ಯತೆ ಹೆಚ್ಚಿದೆ. ಸಿಗುವ ನೀರನ್ನು ಇಂಗಿಸುವ ಮೂಲಕ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವನ್ನು ಅಭಿವೃದ್ಧಿ ಪಡಿಸಿ, ಇದರಿಂದ ಕುಡಿಯುವ ನೀರಿನ ಕೊರತೆ ಆಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ ಖರ್ಗೆ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಬರ ಇದೆ. ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕು. ಮುಂದಿನ 6 ತಿಂಗಳುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುವ ಗ್ರಾಮಗಳನ್ನು ಗುರುತಿಸಿ, ಕುಡಿಯುವ ನೀರು ಪೂರೈಸುವ ಕ್ರಮಗಳನ್ನು ಗುರುತಿಸಿಕೊಳ್ಳಿ. ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸುವ ಮುನ್ನ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನರೇಗಾ ಅಡಿ ಮಾನವ ದಿನಗಳ ಸೃಜನೆಯಲ್ಲಿ ಟಿ.ನರಸೀಪುರ, ನಂಜನಗೂಡು ಹಾಗೂ ಪಿರಿಯಾಪಟ್ಟಣ ತಾಲ್ಲೂಕುಗಳು ಶೇ 50ಕ್ಕಿಂತ ಕಡಿಮೆ ಇದೆ. ಈ ಬಾರಿ ಎಲ್ಲ ಕಡೆ ಬರ ಇದೆ. ನರೇಗಾ ಯೋಜನೆಯಡಿ ಹೆಚ್ಚು ಮಾನವ ದಿನಗಳ ಕೆಲಸ ಆಗಬೇಕಿತ್ತು. ರಾಜ್ಯದಲ್ಲಿ 13 ಕೋಟಿ ಮಾನವ ದಿನಗಳ ಗುರಿ ಇತ್ತು. ಇದರಲ್ಲಿ 10 ಕೋಟಿ ಮಾನವ ದಿನಗಳ ಗುರಿ ಸಾಧಿಸಿದ್ದೇವೆ. ಆದರೆ, ಜಿಲ್ಲೆಯಲ್ಲಿ ಪ್ರಗತಿ ಉತ್ತಮವಾಗಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
34 ಲಕ್ಷ ಮಾನವ ದಿನಗಳ ಗುರಿ: ಮೈಸೂರು ಜಿಲ್ಲೆಯಲ್ಲಿ 34 ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಲಾಗಿದೆ. ಆರ್ಥಿಕ ವರ್ಷದ ಅಂತ್ಯದೊಳಗೆ ಈ ಗುರಿ ಸಾಧಿಸಬೇಕು. ನಂಜನಗೂಡು, ಚಾಮುಂಡಿ ಬೆಟ್ಟದ ವ್ಯಾಪ್ತಿ ಹಾಗೂ ಜಿಲ್ಲೆಯ ಇತರೆ ಕಡೆ ಸೈಕಲ್ ಅಗರಬತ್ತಿ ಅವರೊಂದಿಗೆ ಎನ್ಆರ್ಎಲ್ಎಂ ಯೋಜನೆಯಡಿ ಟೈ ಅಪ್ ಆಗಿ, ಗುಡಿ ಕೈಗಾರಿಕೆಗಳನ್ನು ಉತ್ತೇಜಿಸುವ ಯೋಜನೆಗಳನ್ನು ರೂಪಿಸಲಾಗುವುದು. ಮೈಸೂರು ಜಿಲ್ಲೆ ಪ್ರವಾಸಿ ತಾಣಗಳನ್ನು ಹೆಚ್ಚು ಹೊಂದಿದ್ದು, ಇಲ್ಲಿ ಇರುವ ಪುರಾತನ ಕಲ್ಯಾಣಿಗಳನ್ನು ನರೇಗಾ ಯೋಜನೆಯಡಿ ಸ್ವಚ್ಛಗೊಳಿಸಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.