ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಎನ್.ಕೆ. ಲೋಕನಾಥ್ ಅವರನ್ನು ನೇಮಕಗೊಳಿಸಿ , ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಯೋಜನಾ ಮತ್ತು ಮೇಲ್ವಿಚಾರಣಾ ಮತ್ತು ವೌಲ್ಯಮಾಪನ ಮಂಡಳಿಯ ನಿರ್ದೇಶಕರಾಗಿದ್ದ ಪ್ರೊ. ಎನ್.ಕೆ. ಲೋಕನಾಥ್ ಅವರನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನೇಮಕ ಮಾಡಿ ರಾಜ್ಯಪಾಲ ಥಾವರ್ ಚಂದ್ ಗೇಹ್ಲೋಟ್ ಅವರು ಆದೇಶ ಹೊರಡಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ ಹೇಮಂತ ಕುಮಾರ್ ಅವರ ಅಧಿಕಾರಾವಧಿ 2022ರ ನವೆಂಬರ್ 15ರಂದು ಮುಕ್ತಾಯಗೊಂಡಿತ್ತು. ನಂತರ ಮೈಸೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಡೀನ್ ಪ್ರೊ. ಎಚ್. ರಾಜಶೇಖರ್ ಪ್ರಭಾರ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ಮೈಸೂರು ವಿವಿಯ ರಾಜ್ಯಶಾಸ್ತ್ರ ವಿಭಾಗದ ಡೀನ್ ಮುಜಾರ್ ಎಚ್ ಅಸ್ಸಾದಿ ಅವರು ಪ್ರಭಾರ ಕುಲಪತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಮೈಸೂರು ವಿವಿ ಕುಲಪತಿಯಾಗಿ ಎನ್.ಕೆ. ಲೋಕನಾಥ್ ನೇಮಕಗೊಂಡಿದ್ದಾರೆ.
7 ಜನ ಹೊಸ ವಿವಿಗಳಿಗೆ ಕುಲಪತಿಗಳನ್ನು ನೇಮಿಸಿ ಆದೇಶ: ರಾಜ್ಯ ಸರ್ಕಾರವು ನೂತನವಾಗಿ ಸ್ಥಾಪಿಸಿರುವ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ವಿಶ್ವವಿದ್ಯಾಲಯಗಳಿಗೆ ಚೊಚ್ಚಲ ಕುಲಪತಿಗಳನ್ನು ನೇಮಿಸಿ, ಸೋಮವಾರ ಆದೇಶ ಹೊರಡಿಸಿತ್ತು. ಈ ಕುರಿತು ಎಂದು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದರು.
ಯಾವ ವಿವಿಗೆ ಯಾರು ಕುಲಪತಿ..ಬೆಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಡಾ. ಬಿ ಕೆ ರವಿ ಅವರನ್ನು ಕೊಪ್ಪಳ ವಿವಿಗೆ, ಬಾಗಲಕೋಟೆಯ ತೋಟಗಾರಿಕೆ ವಿವಿಯ ಡಾ. ಅಶೋಕ್ ಸಂಗಪ್ಪ ಆಲೂರು ಅವರನ್ನು ಕೊಡಗು ವಿವಿಗೆ, ಮೈಸೂರು ವಿವಿ ಮಾನವಶಾಸ್ತ್ರ ವಿಭಾಗದ ಡಾ. ಎಂ.ಆರ್. ಗಂಗಾಧರ ಅವರನ್ನು ಚಾಮರಾಜನಗರ ವಿವಿಗೆ, ಬೆಳಗಾವಿಯ ಕೆ.ಎಸ್. ಗೋಗಟೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಆನಂದ್ ಶರದ್ ದೇಶಪಾಂಡೆ ಅವರನ್ನು ಬಾಗಲಕೋಟೆ ವಿವಿಗೆ ಕುಲಪತಿಗಳಾಗಿ ನೇಮಕ ಮಾಡಲಾಗಿದೆ.