ಮೈಸೂರು:ಕೊರೊನಾ ಆರ್ಭಟದ ನಡುವೆ, ಸರಳ ದಸರಾ ಆಚರಣೆ ಮಾಡುತ್ತಿರುವುದಕ್ಕೆ ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಷನಂತೆ ಚುನಾಯಿತ ಪ್ರತಿನಿಧಿಗಳನ್ನೂ ಚಾಮುಂಡಿ ಧಮನಿಸಲಿ ಎಂದು ಕಿಡಿ ಕಾರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರಳ ದಸರಾ ಹೆಸರಿನಲ್ಲಿ ಕೋಟಿ ಕೋಟಿ ರೂ ಲೂಟಿ ಮಾಡಲು ಹೊರಟಿದ್ದಾರೆ. ಇವರ ದೃಷ್ಟಿಯಲ್ಲಿ ಸರಳವಾಗಿ ದಸರಾ ಆಚರಣೆ ಮಾಡುವುದೆಂದರೆ 15 ಕೋಟಿ ರೂ ಖರ್ಚು ಮಾಡುವುದೇ? ಎಂದು ಪ್ರಶ್ನಿಸಿದ್ದಾರೆ.
ಪ್ರೊ. ನಂಜರಾಜೇ ಅರಸ್ ಆಕ್ರೋಶ ದಸರಾ ನೆಪದಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಲೂಟಿ ಮಾಡಲು ಹೊರಟಿದ್ದಾರೆ. ಕೋವಿಡ್ ತುರ್ತು ಸಂದರ್ಭದಲ್ಲಿ ಜನಪರ ಕಾಳಜಿ ಇದ್ದರೆ ಆಸ್ಪತ್ರೆಗಳಿಗೆ ಸೌಲಭ್ಯ ಒದಗಿಸಲಿ. ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಯಾವುದೇ ಆಶೀರ್ವಾದ ಸಿಗುವುದಿಲ್ಲ.
ಜನರ ಆರೋಗ್ಯ ಕಾಪಾಡಿದಾಗ ಮಾತ್ರ ಚಾಮುಂಡಿ ಆಶೀರ್ವಾದ ಸಿಗುತ್ತದೆ. ದುಡ್ಡು ತಿನ್ನಲು ಸಾವು ಸಾಧನ ಅಂದುಕೊಂಡಿರುವ ರಾಜ್ಯ ಸರ್ಕಾರ, ಜನರ ಆರೋಗ್ಯ, ಬದುಕಿನ ಬಗ್ಗೆ ಕಾಳಜಿ ಇದ್ದರೆ ಆಕ್ಸಿಜನ್, ವೆಂಟಿಲೇಟರ್ ಸೌಲಭ್ಯದ ಮೂಲಕ ಬದುಕನ್ನು ಕಟ್ಟುಕೊಡಲಿ ಎಂದಿದ್ದಾರೆ.
ಪ್ರವಾಸೋದ್ಯಮದ ಹೆಸರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಬೇಡ. ಸರಳ ದಸರಾ ಎಂದರೆ ಇವರಿಗೆ ಹದಿನೈದು ಕೋಟಿ ಖರ್ಚು ಮಾಡುವುದೇ? ಇನ್ನು ಅದ್ಧೂರಿ ದಸರಾ ಎಂದರೆ ಅದೆಷ್ಟು ಕೋಟಿಯೋ ಗೊತ್ತಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹದಿನೈದು ಕೋಟಿಯಲ್ಲಿ ಅರಮನೆಯೊಳಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆ ಮೂಲಕ ದುಡ್ಡು ತಿನ್ನುವ ಕೆಲಸ ನಡೆಯುತ್ತದೆ. ಯಾತಕ್ಕಾಗಿ ಈ ಅಧಿಕಾರಿಗಳಿಗೆ, ಮಂತ್ರಿಗಳಿಗೆ ಈ ದುಡ್ಡು ತಿನ್ನುವ ಚಪಲ? ಎಂದು ಅರಸ್ ಪ್ರಶ್ನಿಸಿದ್ದಾರೆ.
ಬಡವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಸಾಯ್ತಿದ್ದಾರೆ. ದೊಡ್ಡ ದೊಡ್ಡ ಅಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಮನೆ, ಆಸ್ತಿ ಮಾರಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಇದೆ. ಈ ವಿಜೃಂಭಣೆಯ ದಸರಾ ಬದಲು ಜನರಿಗೆ ವೈದ್ಯಕೀಯ ಸೌಲಭ್ಯ ನೀಡಲು ಮುಂದಾಗಿ. ಯಾಕೆ ಈ ರೀತಿಯ ಮನೆಹಾಳು ಕೆಲಸ ಮಾಡಲು ಸರ್ಕಾರ ಹೊರಟಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.