ಮೈಸೂರು:ಕೋವಿಡ್ 19 ನಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ, ವೆಂಟಿಲೇಟರ್ ಗಳಿಲ್ಲದೆ ಸಾಯುತ್ತಿದ್ದಾರೆ. ಹೀಗಾಗಿ ಈ ಬಾರಿಯ ದಸರಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ, ಅದೇ ದುಡ್ಡಿಗೆ ವೆಂಟಿಲೇಟರ್ ತರಿಸಿ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರಳ ದಸರಾ ಹೆಸರಲ್ಲಿ ಆಡಂಬರ ಬೇಡ. ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವುದರಿಂದ ಮೈಸೂರು ಜನರಿಗೆ ಅಪಮಾನ ಮಾಡಿದಂತೆ. ಜನರ ಸಾವು ನೋವಿನ ನಡುವೆ ಮನರಂಜನೆ ಬೇಕಾ? ಅವರು ಸಾಯೋದು ನೋಡಿ ಮನರಂಜನೆ ಪಡೆಯುವುದಾದರೆ ನಿಮ್ಮಂತ ಮುಟ್ಟಾಳರಿಲ್ಲ ಎಂದು ಕಿಡಿಕಾರಿದರು.
ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆ ಹಾಗೂ ಅಗತ್ಯ ಸೌಲಭ್ಯಗಳಿಲ್ಲದೆ ಹೆಚ್ಚಿನ ಸಮಸ್ಯೆ ಆಗಿದೆ. ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್ ನಿಂದ 700 ಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಈ ಸಂದರ್ಭದಲ್ಲಿ ಮನರಂಜನೆ ಎಂಬ ಪದವೇ ಅಪ್ರಸ್ತುತ. ಈಗಲೂ ಕಾಲಮಿಂಚಿಲ್ಲ ಸಾಂಸ್ಕೃತಿಕ ಕಾರ್ಯಕ್ರಮ ರದ್ದು ಮಾಡಿ ಎಂದರು.