ಮೈಸೂರು: 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಮುಕ್ತ ಭಾರತ ಆಗಬೇಕು ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಹೇಳಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಸಿವುಮುಕ್ತ, ನಿರುದ್ಯೋಗ ಮುಕ್ತದೇಶ ಮಾಡುವಲ್ಲಿ ಮೋದಿ ವಿಫಲರಾಗಿದ್ದಾರೆ. ದೇಶದ 130 ಕೋಟಿ ಜನರ ಪ್ರಧಾನಿ ಮೋದಿ ಆಗಿಲ್ಲ. ಕೇವಲ ಕೆಲವೇ ಶ್ರೀಮಂತರಿಗೆ ಅವರು ಪ್ರಧಾನಿಯಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ದೇಶದಲ್ಲಿ ಹಿಂದೂ ಧರ್ಮದಲ್ಲಿ ಹಿಂದುಳಿದ ಸಮುದಾಯಗಳು ಸುರಕ್ಷಿತವಾಗಿಲ್ಲ. ಸಂವಿಧಾನದ ಆಶಯಗಳು ಜಾರಿಗೆ ಬರಬೇಕೆಂದರೆ ಮೋದಿ ಮುಕ್ತ ಭಾರತ ಆಗಬೇಕು. ಕರ್ನಾಟಕದಲ್ಲಿ ಬಿಜೆಪಿಯನ್ನು ತೊಲಗಿಸಿದ್ದಾರೆ. ಅದೇ ರೀತಿ ದೇಶದಲ್ಲಿ ಮೋದಿಯನ್ನು ಕಿತ್ತೆಸೆಯಬೇಕು ಎಂದರು.
ನೂತನ ಸಂಸತ್ ಭವನದ ಒಳಾವರಣದಲ್ಲಿ ನಡೆದ ಸ್ಮೋಕ್ ದಾಳಿ ಪ್ರಕರಣವು ಕೇಂದ್ರ ಸರ್ಕಾರದ ಬಹು ದೊಡ್ಡ ನಿರ್ಲಕ್ಷ್ಯ. ಸಂಸತ್ನಲ್ಲಿ ಸಂಸದರಿಗೆ ಭದ್ರತೆ ನೀಡದ ಸರ್ಕಾರ ಬಹು ಸಂಖ್ಯಾತರನ್ನು ಹೇಗೆ ರಕ್ಷಣೆ ಮಾಡುತ್ತದೆ ಎಂದು ಪ್ರಶ್ನಿಸಿದರು. ಶ್ರೀಮಂತರಿಂದ ಶ್ರೀಮಂತರಿಗಾಗಿ ಶ್ರೀಮಂತರಿಗೋಸ್ಕರ ಇರುವ ಯಾವುದಾದರೂ ಸರ್ಕಾರವಿದ್ದರೆ ಅದು ಮೋದಿ ಸರ್ಕಾರ. ಮೋದಿ ಯುಗದಲ್ಲಿ ಬಡ ಸಾಮಾನ್ಯರಿಗೆ ಬದುಕಲು ಸಾಧ್ಯವಿಲ್ಲ. ಬಿಲಿಯನ್ ಮಿಲಿಯನ್‌ಗೂ ವ್ಯತ್ಯಾಸ ಗೊತ್ತಿಲ್ಲದ ನಿರ್ಮಲಾ ಸೀತಾರಾಮನ್ ನಮ್ಮ ದೇಶದ ವಿತ್ತ ಸಚಿವರು. ದೇಶದಲ್ಲಿ ಅಪೌಷ್ಟಿಕತೆ, ಬಡತನ, ದೌರ್ಜನ್ಯಗಳು ಹೆಚ್ಚಾಗುತ್ತಿವೆ. ನಮ್ಮ ಹಕ್ಕಿಗಾಗಿ ನಾವು ಇಡೀ ದೇಶಾದ್ಯಂತ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.