ಕರ್ನಾಟಕ

karnataka

ETV Bharat / state

ಕುಲಪತಿ ನೇಮಕದಲ್ಲಿ ರಾಜ್ಯಪಾಲರನ್ನು ಹೊರಗಿಡಬೇಕು: ಪ್ರೊ.ಬಿ.ಕೆ.ಚಂದ್ರಶೇಖರ್ - ಈಟಿವಿ ಭಾರತ ಕನ್ನಡ

ವಿಶ್ವವಿದ್ಯಾಲಯದ ಯಾವುದೇ ವಿಷಯದಲ್ಲೂ ರಾಜ್ಯಪಾಲರಿಗೆ ಮಧ್ಯಪ್ರವೇಶಿಸಲು ಅವಕಾಶ ಇರಬಾರದು- ಮಾಜಿ ಸಚಿವ ಪ್ರೊ.ಬಿ.ಕೆ ಚಂದ್ರಶೇಖರ್ ಅಭಿಪ್ರಾಯ- ನಿಯಮ ಬದಲಾವಣೆಗೆ ಆಗ್ರಹ

Chandrashekar
ಪ್ರೊ.ಬಿ.ಕೆ.ಚಂದ್ರಶೇಖರ್

By

Published : Jan 7, 2023, 11:13 AM IST

ಕುಲಪತಿ ನೇಮಕದಲ್ಲಿ ರಾಜ್ಯಪಾಲರನ್ನು ಹೊರಗಿಡಬೇಕು: ಪ್ರೊ.ಬಿ.ಕೆ.ಚಂದ್ರಶೇಖರ್

ಮೈಸೂರು:ಕುಲಪತಿಗಳ ನೇಮಕ ಮತ್ತು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ರಾಜ್ಯಪಾಲರನ್ನು ದೂರವಿರಿಸಬೇಕು. ಅಲ್ಲದೇ ಕುಲಪತಿಗಳ ಆಯ್ಕೆಯ ಶೋಧನಾ ಸಮಿತಿಯಲ್ಲಿಯೂ ಬದಲಾವಣೆ ಮಾಡಬೇಕು ಎಂದು ಮಾಜಿ ಸಚಿವ ಪ್ರೊ.ಬಿ.ಕೆ ಚಂದ್ರಶೇಖರ್ ಆಗ್ರಹಿಸಿದರು.

ಮೈಸೂರಿನ ಜಲದರ್ಶಿನಿ‌ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯೇತರ ರಾಜ್ಯ ಸರಕಾರಗಳಲ್ಲಿ ಅಲ್ಲಿನ ರಾಜ್ಯಪಾಲರು ಪ್ರತಿ ವಿಷಯದಲ್ಲೂ ಮೂಗು ತೂರಿಸುತ್ತಿದ್ದಾರೆ. ಇದೆಲ್ಲವೂ ಸರಕಾರದ ಸಂಪ್ರದಾಯಕ್ಕೆ ವಿರುದ್ಧವಾದುದು. ಬಿಜೆಪಿಯೇತರ ಸರಕಾರ ಇರುವ ತಮಿಳುನಾಡು, ದೆಹಲಿ,ಪಶ್ಚಿಮ ಬಂಗಾಳ, ಕೇರಳ ವಿಶ್ವವಿದ್ಯಾನಿಲಯಗಳ ಮೇಲೆ ರಾಜ್ಯಪಾಲರು ಹಿಡಿತ ಸಾಧಿಸುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಶಿಕ್ಷಣದ ಮೇಲೆ ಪ್ರಭಾವ ಬೀರಲಿದೆ. ಸಂವಿಧಾನದ ಆಶಯಗಳಿಗೆ ತಕ್ಕಂತೆ ರಾಜ್ಯಪಾಲರು ನಡೆದುಕೊಳ್ಳಬೇಕು ಎಂದರು.

ವಿಶ್ವವಿದ್ಯಾನಿಲಯಗಳ ಕುಲಪತಿ ನೇಮಕದಲ್ಲಿಯೂ ಜಾತಿ, ಹಣ, ರಾಜಕೀಯ ಪ್ರಭಾವದ ಜೊತೆಗೆ ಮಠಗಳು ಇಂತಹ ವಿಷಯಗಳತ್ತ ಆಸಕ್ತ ತೋರುತ್ತಿರುವುದು ಬೇಸರದ ಸಂಗತಿಯಾಗಿದೆ. ಕುಲಪತಿಗಳ ನೇಮಕದಲ್ಲಿ ರಾಜ್ಯ ಸರಕಾರ ಪಾರದರ್ಶಕತೆ ತರಬೇಕು. ಯಾವುದೇ ಸರಕಾರ ಇದ್ದರೂ, ಉನ್ನತ ಶಿಕ್ಷಣ ಹಾಗೂ ವಿಶ್ವವಿದ್ಯಾಲಯಗಳ ವಿಷಯಗಳತ್ತ ಮೂಗು ತೂರಿಸಬಾರದು. ಕುಲಪತಿಗಳ ನೇಮಕದ ಅಧಿಕಾರ ರಾಜ್ಯಪಾಲರಿಗೆ ನೀಡಬಾರದು. ಕುಲಪತಿಗಳ ನೇಮಕಕ್ಕೆ ಶೋಧನಾ ಸಮಿತಿಯಲ್ಲಿ ಐಐಟಿ, ಐಐಎಸ್‌ಸಿ ಅಂತಹ ಸಂಸ್ಥೆಗಳ ತಜ್ಞರು ಇರಬೇಕು. ಆಗ ಸರ್ಕಾರ ಮತ್ತು ರಾಜ್ಯಪಾಲರ ಹಿಡಿತ ಹೋಗುತ್ತದೆ ಎಂದು ಹೇಳಿದರು.

ಕುಲಪತಿಯಾಗಲು ಐದಾರು ಕೋಟಿ ದುಡ್ಡು ತೆಗೆದುಕೊಂಡರೆ ಆತ ಏನಾಗುತ್ತಾನೆ? ಬೇರೆ ವ್ಯವಹಾರ ಮಾಡಲೇಬೇಕಾಗುತ್ತದೆ. ಆಯ್ಕೆ ಪ್ರಕ್ರಿಯೆಗೆ ರಚಿಸುವ ಶೋಧನಾ ಸಮಿತಿಯಲ್ಲಿ ಹೆಸರು ತರುವುದಕ್ಕೂ ಲಾಬಿ ನಡೆಯುತ್ತಿದೆ ಎಂಬ ಬಿಜೆಪಿ ಸಂಸದ ಪ್ರತಾಪ ಸಿಂಹ ಹೇಳಿಕೆಗೆ ನನ್ನ ಸಹಮತವಿದೆ ಎಂದು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ:ನೀವೇನು ಪೂಜಾರಿಯೇ?.. ರಾಮಮಂದಿರ ಉದ್ಘಾಟನೆ ಘೋಷಿಸಿದ ಅಮಿತ್​ ಶಾ ವಿರುದ್ಧ ಖರ್ಗೆ ವಾಗ್ದಾಳಿ

ಸುಪ್ರೀಂ ಕೋರ್ಟ್‌ ಹೇಗೆ ಕೆಲಸ ಮಾಡಬೇಕು ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರು ಬುದ್ಧಿವಾದ ಹೇಳುತ್ತಾರೆ. ಹೀಗೆ ಹೇಳುವುದು ಕ್ರಮವಲ್ಲ. ಸಾರ್ವಜನಿಕವಾಗಿ ಮಾತನಾಡುವುದು ಖಂಡನೀಯ ಎಂದರು. ಜಾರಿ ನಿರ್ದೇಶನಾಲಯವನ್ನು ಸರಕಾರ ಉದ್ದೇಶ ಈಡೇರಿಕೆಗಾಗಿ ದಾಳವಾಗಿ ಬಳಸಿಕೊಳ್ಳುತ್ತಿದೆ. ಸಿಬಿಐ ಕೂಡ ಸರಕಾರ ಹೇಳಿದಂತೆ ಕೇಳುತ್ತಿದೆ. ಚುನಾವಣಾ ಆಯೋಗವೂ ಸರಿಯಾದ ದಿಕ್ಕಿನಲ್ಲಿ ಹೋಗುತ್ತಿಲ್ಲ. ಚುನಾವಣಾ ಆಯುಕ್ತರಾಗಿದ್ದ ಶೇಷನ್ ಅವರ ರೀತಿಯಲ್ಲಿ ಚುನಾವಣೆಯ ಆಯುಕ್ತರು ಕೆಲಸ ಮಾಡಬೇಕು. ಆಗ ಮಾತ್ರ ರಾಜಕಾರಣಿಗಳು ಹೆದರುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ಆರು ವಿಶ್ವವಿದ್ಯಾಲಯ ಸ್ಥಾಪನೆ:ರಾಜ್ಯದಲ್ಲಿ ಆರು ಖಾಸಗಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಬೆಂಗಳೂರಲ್ಲಿ ಟಿ.ಜಾನ್ ವಿಶ್ವವಿದ್ಯಾಲಯ, ರಾಜ್ಯ ಒಕ್ಕಲಿಗರ ಸಂಘ ವಿಶ್ವವಿದ್ಯಾಲಯ, ಸಪ್ತಗಿರಿ ವಿಶ್ವವಿದ್ಯಾಲಯ, ಆಚಾರ್ಯ ವಿಶ್ವವಿದ್ಯಾಲಯ, ದಾವಣಗೆರೆಯಲ್ಲಿ ಜಿ.ಎಂ.ಸಿದ್ದೇಶ್ವರ ವಿಶ್ವವಿದ್ಯಾಲಯ ಮತ್ತು ಬಳ್ಳಾರಿಯಲ್ಲಿ ಕಿಷ್ಕಂದಾ ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆ ನಿರ್ಣಯಿಸಲಾಗಿದೆ.

ಯತ್ನಾಳ್​ರಿಂದಲೂ ವ್ಯಕ್ತವಾಗಿತ್ತು ಆಕ್ಷೇಪ: ರಾಜ್ಯದಲ್ಲಿ ಹೆಚ್ಚು ವಿಶ್ವವಿದ್ಯಾಲಯ ಯಾಕೆ ಸ್ಥಾಪಿಸುತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ. ಕುಲಪತಿಗಳನ್ನು ನೇಮಕ ಮಾಡಿ ಹಣ ತೆಗೆದುಕೊಳ್ಳುತ್ತಾರೆ. ಕಟ್ಟಡ ನಿರ್ಮಾಣ, ಕಂಪ್ಯೂಟರ್ ಖರೀದಿ ಮಾಡಿ ಸುಖಾಸುಮ್ಮನೆ ಹಣವೆಲ್ಲಾ ಪೋಲಾಗುತ್ತಿದೆ. ಇದ್ದ ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿ ಮಾಡುವುದನ್ನು ಬಿಟ್ಟು ಹೊಸ ವಿವಿ ಸ್ಥಾಪನೆ ಮಾಡಲು ಮುಂದಾಗಿದ್ದಾರೆ. ಮೊದಲು ಈಗಿರುವ ವಿಶ್ವವಿದ್ಯಾಲಗಳನ್ನು ಉನ್ನತೀಕರಿಸಲಿ. ಜಿಲ್ಲೆಗೊಂದು ವಿವಿ ಬದಲು, ಗುಣಮಟ್ಟದ ಶಿಕ್ಷಣವನ್ನು ಈಗಿರುವ ವಿಶ್ವವಿದ್ಯಾಲಯಗಳು ನೀಡುವಂತೆ ಮಾಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇತ್ತೀಚೆಗೆ ವಿಜಯಪುರದಲ್ಲಿ ಹೇಳಿದ್ದರು.

ಇದನ್ನೂ ಓದಿ:ಸಿದ್ದರಾಮಯ್ಯ ಕಪಿಚೇಷ್ಟೆ ಮಾಡುವುದನ್ನು ನಿಲ್ಲಿಸಬೇಕು: ಕೆ ಎಸ್ ಈಶ್ವರಪ್ಪ ವಾಗ್ದಾಳಿ

ABOUT THE AUTHOR

...view details