ಮೈಸೂರು:ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜೈಲಿಗೆ ಹಿಂದಿರುಗುವ ವೇಳೆ ಕೈದಿಯೊಬ್ಬ ಗಾಂಜಾವನ್ನು ಬಚ್ಚಿಟ್ಟುಕೊಂಡು ಕಾರಾಗೃಹದ ಒಳಗೆ ಹೋಗುವ ಸಮಯದಲ್ಲಿ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿರುವ ಘಟನೆ ಬುಧವಾರ ನಡೆದಿದೆ. ಮೈಸೂರು ಕಾರಾಗೃಹದಲ್ಲಿ ಸಜಾಬಂಧಿಯಾಗಿರುವ ಮಡಿಕೇರಿ ಬಳಿಯ ಇಬ್ಬಣಿವಾಳವಾಡಿ ಗ್ರಾಮದ ನಿವಾಸಿ ದುರ್ಗದತ್ತ ಕಾಳಿದಾಸಸ್ವಾಮಿ (28) ಕಾರಾಗೃಹದೊಳಕ್ಕೆ ಹೋಗುವ ವೇಳೆ ಸಿಕ್ಕಿ ಬಿದ್ದಿದ್ದಾನೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿದ್ದ ದುರ್ಗದತ್ತ ಕಾಳಿದಾಸಸ್ವಾಮಿಗೆ ಅನಾರೋಗ್ಯದ ಕಾರಣ ಜೈಲು ಅಧಿಕಾರಿಗಳು ಬುಧವಾರ ಮಧ್ಯಾಹ್ನ ಚಿಕಿತ್ಸೆಗಾಗಿ ಕೆಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆತನಿಗೆ ಚಿಕಿತ್ಸೆ ಕೊಡಿಸಿ ಬುಧವಾರ ಮಧ್ಯಾಹ್ನ 2 ಗಂಟೆ ವೇಳೆಗೆ ವಾಪಸ್ ಜೈಲಿಗೆ ಕರೆತಂದಿದ್ದಾರೆ. ಈ ವೇಳೆ ಆತನನ್ನು ಅಲ್ಲಿನ ಸಿಬ್ಬಂದಿಗಳಾದ ಉಮೇಶ್ ಚಂದ್ರನಾಯಕ್ ಹಾಗೂ ಶಿವಾನಂದ ಕೋಕಲೆ ಅವರು ತಪಾಸಣೆಗೊಳಪಡಿಸಿದ್ದಾರೆ. ಈ ವೇಳೆ ಆತನ ಬಲಗಾಲಿನಲ್ಲಿ ಕಪ್ಪು ಬಣ್ಣದ ಟೇಪ್ ಸುತ್ತಿರುವುದು ಅವರಿಗೆ ಕಂಡುಬಂದಿದೆ. ಕೂಡಲೇ ಟೇಪ್‌ನ್ನು ತೆಗೆದು ಪರಿಶೀಲನೆ ನಡೆಸಿದಾಗ ಅಲ್ಲಿ ಗಾಂಜಾ ಪೊಟ್ಟಣವಿರುವುದು ಕಂಡುಬಂದಿದೆ. ತಕ್ಷಣವೇ ಮೇಲಾಧಿಕಾರಿಗಳಿಗೆ ವಿಚಾರ ತಿಳಿಸಿದ್ದಾರೆ.