ಮೈಸೂರು: ಈ ಬಾರಿ ನಾಡಹಬ್ಬ ದಸರಾವನ್ನು ಸೆ.26 ರ ಸೋಮವಾರದಂದು 9.45 ರಿಂದ 10.04 ವರೆಗಿನ ಶುಭ ಲಗ್ನದಲ್ಲಿ ಭಾರತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಮುಂಡಿ ಬೆಟ್ಟದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜೊತೆಗೆ ನಾಡಹಬ್ಬ ದಸರಾದ ವಿವಿಧ ಕಾರ್ಯಕ್ರಮಗಳ ಪೋಸ್ಟರ್ ಬಿಡುಗಡೆ ಮಾಡಿ ಅವುಗಳ ವಿವರ ನೀಡಿದರು.
ರಾಷ್ಟ್ರಪತಿಯಿಂದ ಮೈಸೂರು ದಸರಾ ಉದ್ಘಾಟನೆ: ಅದ್ಧೂರಿ ದಸರಾ ಆಚರಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26ರಂದು ಚಾಮುಂಡಿ ಬೆಟ್ಟದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದ್ದು, ರಾಷ್ಟ್ರಪತಿ ಅವರು ದಸರಾ ಉದ್ಘಾಟನೆಗೆ ಆಗಮಿಸುತ್ತಿರುವುದರಿಂದ ಆಹ್ವಾನ ಪತ್ರಿಕೆಯಲ್ಲಿ ಮೊದಲ ದಿನದ ಕಾರ್ಯಕ್ರಮದ ವಿವರವನ್ನು ಕನ್ನಡದ ಜೊತೆಗೆ ಇಂಗ್ಲಿಷ್ನಲ್ಲೂ ಮುದ್ರಿಸಲಾಗುತ್ತದೆ. ಸೆಪ್ಟೆಂಬರ್ 23 ರಿಂದ 25 ರವರೆಗೆ 3 ದಿನಗಳ ಕಾಲ ರೈತ ದಸರಾ ಮತ್ತು ಗ್ರಾಮೀಣ ದಸರಾ ನಡೆಯಲಿದ್ದು, ಕೃಷಿ ಸಚಿವ ಬಿ ಸಿ ಪಾಟೀಲ್ ಹಾಗೂ ಪಶುಸಂಗೋಪನಾ ಸಚಿವರು ಭಾಗಿಯಾಗಲಿದ್ದಾರೆ ಎಂದರು.
ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 3 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಅನಾವರಣ ಮಾಡಿ, ನಿತ್ಯ ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಕ್ಕೆ 900 ಕಲಾವಿದರು ಅರ್ಜಿ ಸಲ್ಲಿಸಿದ್ದು, ಸ್ಥಳೀಯ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ 280 ಕಲಾವಿದರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಅಪ್ಪುಗೆ ಯುವ ದಸರಾ ಮೀಸಲು:4 ದಿನಗಳ ಕಾಲ ನಡೆಯುವ ಕವಿಗೋಷ್ಠಿ ಸೆಪ್ಟೆಂಬರ್ 26ರಂದು ಉದ್ಘಾಟನೆ ಆಗಲಿದೆ. ಯೋಗ ದಸರಾ ಏಳು ದಿನಗಳ ಕಾಲ ನಡೆಯಲಿದೆ. ಆಹಾರ ಮೇಳ ಹತ್ತು ದಿನಗಳ ಕಾಲ ನಡೆಯಲಿದ್ದು, ಸೆಪ್ಟೆಂಬರ್ 27 ರಂದು ಯುವ ದಸರಾ ಆರಂಭವಾಗಲಿದೆ. ಒಟ್ಟು ಏಳು ದಿನಗಳ ಯುವ ದಸರಾದಲ್ಲಿ ಒಂದು ದಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ಗೆ ಮೀಸಲೀಡಲು ನಿರ್ಧರಿಸಲಾಗಿದೆ. ಈ ಸಂಬಂಧ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸೆಪ್ಟೆಂಬರ್ 27 ರಿಂದ ಐದು ದಿನಗಳ ಕಾಲ ಮಹಿಳಾ ದಸರಾ, ಸೆಪ್ಟೆಂಬರ್ 29 ಮತ್ತು 30 ರಂದು ಮಕ್ಕಳ ದಸರಾ ನಡೆಯಲಿದೆ. ಸೆಪ್ಟೆಂಬರ್ 26 ರಿಂದ 29ರ ವರೆಗೆ ದಸರಾ ಕ್ರೀಡಾಕೂಟ, ಸೆಪ್ಟೆಂಬರ್ 26 ರಿಂದ ಏಳು ದಿನ ಚಲನ ಚಿತ್ರೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.
ರಾಷ್ಟ್ರಪತಿ ಭೇಟಿ ಹಿನ್ನೆಲೆ:ರಾಷ್ಟ್ರಪತಿಗಳು ದಸರಾ ಉದ್ಘಾಟನೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ವೇದಿಕೆ ಮೇಲೆ ಯಾರು ಇರಬೇಕೆಂದು ಜಿಲ್ಲಾಧಿಕಾರಿಗಳು ನಿರ್ಧರಿಸುತ್ತಾರೆ. ಈಗಾಗಲೇ ಸ್ಥಳೀಯ ಶಾಸಕರು, ಸಚಿವರಿಗೆ ಅವಕಾಶ ಕೊಡಬೇಕೆಂದು ರಾಷ್ಟ್ರಪತಿ ಕಚೇರಿಗೆ ಮಾಹಿತಿ ನೀಡಲಾಗಿದ್ದು, ರಾಷ್ಟ್ರಪತಿ ಕಚೇರಿಯ ತೀರ್ಮಾನ ಅಂತಿಮವಾಗುತ್ತದೆ.