ಕರ್ನಾಟಕ

karnataka

ETV Bharat / state

ನಾಳೆ ಮೈಸೂರಿಗೆ ರಾಷ್ಟ್ರಪತಿ; ತಮಿಳುನಾಡಿನ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಲಿರುವ ದ್ರೌಪದಿ ಮುರ್ಮು

ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರಿಗೆ ಆಗಮಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ -ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು
ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ -ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು

By

Published : Aug 4, 2023, 8:24 PM IST

ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಮಾಹಿತಿ

ಮೈಸೂರು :ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಸ್ಟ್ 5ರಂದು ಮಧ್ಯಾಹ್ನ 12.30 ಗಂಟೆಗೆ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ನಂತರ ಮಧುಮಲೈಗೆ ನಿರ್ಗಮಿಸುವರು. ಸಂಜೆ 5.45 ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿ ಚೆನ್ನೈಗೆ ತೆರಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾಹಿತಿ ನೀಡಿದ್ದಾರೆ.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಾನಾ ಇಲಾಖೆಗಳ ಸಭೆ ನಡೆಸಿದ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ರಾಷ್ಟ್ರಪತಿ ಆಗಮಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಅನಾನುಕೂಲ ಆಗದಂತೆ ಶಿಷ್ಟಾಚಾರ ಪ್ರಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ಗೊಂದಲಕ್ಕೆ ಆಸ್ಪದ ಇಲ್ಲದಂತೆ ಇಲಾಖೆಗಳು ಸಮನ್ವಯದೊಂದಿಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ರೂಮ್​ಗಳ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಪರಿಶೀಲಿಸಬೇಕು. ಅದೇ ರೀತಿ ವಿದ್ಯುಚ್ಛಕ್ತಿ ಹಾಗೂ ಪರ್ಯಾಯ ವ್ಯವಸ್ಥೆ ಸಮರ್ಪಕವಾಗಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ, ವರದಿ ನೀಡಬೇಕೆಂದರು. ವಿಮಾನ ನಿಲ್ದಾಣ, ಕಾರ್ಯಕ್ರಮ ಸ್ಥಳದಲ್ಲಿ ತುರ್ತು ವೈದ್ಯಕೀಯ ವ್ಯವಸ್ಥೆ, ವೈದ್ಯರ ತಂಡ, ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಬೇಕು. ಆಹಾರ ಸುರಕ್ಷತೆ, ಭದ್ರತೆ ಮತ್ತು ಶಿಷ್ಟಾಚಾರ ಪಾಲನೆಗೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಧಿತರಿದ್ದರು.

ತೆಪ್ಪಕಾಡಿಗೆ ರಾಷ್ಟ್ರಪತಿ ಭೇಟಿ: ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಶನಿವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗುಂಡ್ಲುಪೇಟೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ತೆಪ್ಪಕಾಡು ಆನೆ ಶಿಬಿರ ಗುಂಡ್ಲುಪೇಟೆ ಗಡಿಭಾಗದಲ್ಲಿ ಬರುವುದರಿಂದ ಮತ್ತು ಪ್ರವಾಸ ಮಾರ್ಗ ದಿಢೀರ್ ಬದಲಾಗಿ ರಸ್ತೆ ಮಾರ್ಗದಲ್ಲಿ ಸಂಚರಿಸಬೇಕಾದ ಪ್ರಮೇಯ ಬಂದರೆ ಎಂದು ಗುಂಡ್ಲುಪೇಟೆಯಲ್ಲಿ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.‌

ಮೈಸೂರಿನಿಂದ ಬಂಡೀಪುರದ ಗಡಿವರೆಗೆ ರಾಷ್ಟ್ರಪತಿಗಳ ಕಾನ್ವೆ ಶುಕ್ರವಾರ ಸಂಜೆ ಪೂರ್ವ ತಾಲೀಮು ನಡೆಸಿದ್ದು, ಗುಂಡ್ಲುಪೇಟೆ ಹೊರವಲಯದಲ್ಲಿ ಈಗಾಗಲೇ ಹೆಲಿಪ್ಯಾಡ್ ಕೂಡ ನಿರ್ಮಾಣ ಮಾಡಲಾಗಿದೆ. 150 ಪೊಲೀಸ್ ಸಿಬ್ಬಂದಿ ತಂಡವನ್ನು ಈಗಾಗಲೇ ನಿಯೋಜನೆ ಮಾಡಲಾಗಿದೆ. ರೂಟ್ ಮ್ಯಾಪ್ ಪ್ರಕಾರ, ಅವರು ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸಲಿದ್ದು, ಹವಾಮಾನ ವೈಪರೀತ್ಯಗಳಿಂದ ರಸ್ತೆ ಮೂಲಕ ಸಂಚರಿಸಬೇಕಾದರೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಚಾಮರಾಜನಗರ ಎಸ್ಪಿ ಪದ್ಮಿನಿ ಸಾಹು ಮಾಹಿತಿ ನೀಡಿದ್ದಾರೆ.

ತೆಪ್ಪಕಾಡಿನಲ್ಲಿ ಆಸ್ಕರ್ ವಿಜೇತ ಡಾಕ್ಯುಮೆಂಟರಿ 'ದ ಎಲಿಫೆಂಟ್ ವಿಸ್ಪರರ್ಸ್' ಖ್ಯಾತಿಯ ಬೊಮ್ಮ ಹಾಗೂ ಬೆಳ್ಳಿ ದಂಪತಿ ವಾಸ ಮಾಡುತ್ತಿದ್ದು, ರಾಷ್ಟ್ರಪತಿ ಮುರ್ಮು ಬೊಮ್ಮನ್ ದಂಪತಿಯನ್ನು ಭೇಟಿ ಮಾಡಲಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೇ ಪ್ರಧಾನಿ ಮೋದಿ ಕೂಡ ತೆಪ್ಪಕಾಡಿಗೆ ಭೇಟಿ ಕೊಟ್ಟಿದ್ದರು.

ಇದನ್ನೂ ಓದಿ:ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಶಾಂತಿ ಮರುಸ್ಥಾಪನೆಗೆ ಕ್ರಮ ಕೈಗೊಳ್ಳಲಿ: ರಾಷ್ಟ್ರಪತಿ ಭೇಟಿಯಾದ ಖರ್ಗೆ ನಿಯೋಗದ ಒತ್ತಾಯ

ABOUT THE AUTHOR

...view details