ಕರ್ನಾಟಕ

karnataka

ETV Bharat / state

ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ.. ಅರಮನೆಯೊಳಗೆ ಭರದಿಂದ ಸಾಗಿದ ಸಿದ್ಧತೆಗಳು.. - Preparation for Mysore Dasara news

ಈ ಬಾರಿ ನಾಡಹಬ್ಬ ದಸರಾಗೆ ಚಾಮುಂಡಿ ಬೆಟ್ಟದಲ್ಲಿ ಅ.7ರಂದು ಬೆಳಗ್ಗೆ 8.15ರ ಶುಭ ಲಗ್ನದಲ್ಲಿ ನಾಡ ಅಧಿದೇವತೆ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಗುವುದು. ದಸರಾಗೆ ಮಾಜಿ ಸಿಎಂ ಹಾಗೂ ಬಿಜೆಪಿಯ ಹಿರಿಯ ನಾಯಕ ಎಸ್ಎಂ ಕೃಷ್ಣ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಗಣ್ಯರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ..

Preparation for Mysore Dasara
ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ

By

Published : Oct 1, 2021, 7:27 PM IST

Updated : Oct 1, 2021, 10:34 PM IST

ಮೈಸೂರು :ಮೈಸೂರು ದಸರಾ ಪ್ರಪಂಚದಲ್ಲೇ ಪ್ರಸಿದ್ಧಿ. ಜಂಬೂಸವಾರಿ ಹಾಗೂ ಅರಮನೆಯೊಳಗಿನ ರಾಜಪರಂಪರೆಯ ಚಿನ್ನದ ಸಿಂಹಾಸನದ ಖಾಸಗಿ ದರ್ಬಾರ್ ತುಂಬಾ ಪ್ರಸಿದ್ಧವಾಗಿದೆ.

ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿದೆ. ಅರಮನೆ ಮುಂಭಾಗದಲ್ಲಿ ಗಜಪಡೆಯ ತಾಲೀಮು, ಅರಮನೆಯೊಳಗೆ ಸಿಂಹಾಸನ ಜೋಡಣೆ ಮಾಡಲಾಗುತ್ತಿದೆ. ನಾಡಹಬ್ಬ ದಸರಾದ ಸಿದ್ಧತೆಯ ವಿವರ ಇಲ್ಲಿದೆ.

ಅರಮನೆಯೊಳಗೆ ಭರದಿಂದ ಸಾಗಿದ ಸಿದ್ಧತೆಗಳು

ಸಾಂಪ್ರದಾಯಿಕ ಗಜಪಯಣ :ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಗಜಪಡೆ ಆಗಮಿಸಿತು. ಸೆ.13ರ ಬೆಳಗ್ಗೆ 9.20 ರಿಂದ 10.20ರೊಳಗೆ ಸಲ್ಲುವ ತುಲಾ ಲಗ್ನದಲ್ಲಿ ಕಾಡಿನ ಬಾಗಿಲಿನಲ್ಲಿ ಆನೆಗಳನ್ನು ನಿಲ್ಲಿಸಿ, ಪಾದ ತೊಳೆದು, ಅರಿಶಿಣ, ಕುಂಕುಮ‌, ಅಕ್ಷತೆ, ಗಂಧಪತ್ರಗಳನ್ನು ಹಚ್ಚಿ, ವಿಶೇಷ ಪೂಜೆ ಮಾಡಲಾಯಿತು.

ನಾನಾ ವಿಧದ ಭಕ್ಷ್ಯಗಳು, ಪಂಚ ಫಲಗಳನ್ನು ಇಟ್ಟು ನೈವೇದ್ಯ ಮಾಡಿ ಚಾಮರ ಬೀಸಿ, ಪುಷ್ಪಾರ್ಚನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು.‌ ಗಜಪಯಣದ ಮೂಲಕ ಮೈಸೂರು ಪುರ ಪ್ರವೇಶಿಸಿದ ಅಭಿಮನ್ಯು ನೇತೃತ್ವದ 8 ಆನೆಗಳು ಅರಣ್ಯಭವನದಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಿದ್ದವು. ಈ 8 ಆನೆಗಳ ಜೊತೆಗೆ ಮಾವುತರು ಹಾಗೂ ಕಾವಾಡಿಗಳು ಮತ್ತು ಇತರ ಕೆಲಸ ನಿರ್ವಹಿಸಲು ಸಿಬ್ಬಂದಿ ಸೇರಿ 50 ಮಂದಿ ಆಗಮಿಸಿದ್ದಾರೆ.

ಸೆಪ್ಟೆಂಬರ್‌ 16ರ ಬೆಳಗ್ಗೆ 5.15ರಿಂದ 5.45ರೊಳಗೆ ಸಲ್ಲುವ ಬ್ರಾಹ್ಮಿ ಮುಹೂರ್ತದಲ್ಲಿ ಗಜಪಡೆಗೆ ಮೊದಲ ಪೂಜೆ ಸಲ್ಲಿಸಲಾಯಿತು. ಗಣಪತಿಗೆ ಇಷ್ಟವಾದಂತಹ ಪಂಚಕಜ್ಜಾಯ, ಪಂಚ ಭಕ್ಷ್ಯಗಳನ್ನಿಟ್ಟು ನೈವೇದ್ಯ ಮಾಡಿ ಪೂಜಿಸಲಾಯಿತು. ‌7.35ಕ್ಕೆ ಅರಣ್ಯಭವನದಿಂದ ಬೀಳ್ಕೊಡಲಾಯಿತು.

ಗಜಪಡೆಗೆ ಅರಮನೆಯಲ್ಲಿ ಸ್ವಾಗತ :ಅಭಿಮನ್ಯು ನೇತೃತ್ವದ ಗಜಪಡೆ ಶುಭ ತುಲಾ ಲಗ್ನದಲ್ಲಿ ಜಯಮಾರ್ತಾಂಡ ಗೇಟ್ ಮೂಲಕ ಅರಮನೆ ಪ್ರವೇಶ ಮಾಡಿದವು. ಅರಮನೆಗೆ ಆಗಮಿಸಿದ ಗಜಪಡೆಯನ್ನು ಬೆಳಗ್ಗೆ 8.36 ರಿಂದ 9.11ರ ನಡುವಿನ ತುಲಾ ಲಗ್ನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹಾಗೂ ಅರಣ್ಯಾಧಿಕಾರಿಗಳು ಪೂಜೆ ಸಲ್ಲಿಸಿ ಬರಮಾಡಿಕೊಂಡರು.

ಗಜಪಡೆಗೆ ಪ್ರತಿದಿನ ತಾಲೀಮು :ಸೆಪ್ಟೆಂಬರ್‌ 19ರಿಂದ ಅಭಿಮನ್ಯು ನೇತೃತ್ವದ ಗಜಪಡೆಯ ತಾಲೀಮು ಆರಂಭಿಸಲಾಯಿತು. ‌ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅಭಿಮನ್ಯು ನೇತೃತ್ವದ ಗಜಪಡೆ ಕಳೆದ ಎರಡು ದಿನಗಳ ಕಾಲ ಅರಮನೆಯಲ್ಲಿ ವಿಶ್ರಾಂತಿ ಪಡೆದವು. ಬಳಿಕ ಸೆಪ್ಟೆಂಬರ್ 19ರಂದು ತಾಲೀಮು ಆರಂಭಿಸಿದವು.

ಗಜಪಡೆಗೆ ವಿಶೇಷ ಆಹಾರ :ದಸರಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ವಿವಿಧ ಶಿಬಿರಗಳಿಂದ ಅಭಿಮನ್ಯು, ಧನಂಜಯ, ವಿಕ್ರಮ,‌ ಗೋಪಾಲಸ್ವಾಮಿ, ಅಶ್ವತ್ಥಾಮ, ಕಾವೇರಿ, ಚೈತ್ರಾ ಮತ್ತು ಲಕ್ಷ್ಮಿ ಆನೆಗಳು ಆಗಮಿಸಿವೆ. ಪ್ರತಿದಿನ ವಿಶೇಷ ಆಹಾರವಾಗಿ ಹೆಸರು ಕಾಳು, ಉದ್ದಿನ ಕಾಳು, ಗೋಧಿ, ಕುಚಲಕ್ಕಿಯೊಂದಿಗೆ ಬೆಣ್ಣೆ, ತರಕಾರಿ ಬೆರೆಸಿ ಕೊಡಲಾಗುತ್ತದೆ. ಜೊತೆಗೆ ಭತ್ತ, ಹಿಂಡಿ, ಕಾಯಿ, ಬೆಲ್ಲ, ಹಸಿ ಹುಲ್ಲು, ಆಲದ ಮರದ ಸೊಪ್ಪು, ಒಣ ಹುಲ್ಲು ನೀಡಲಾಗುತ್ತದೆ.

ಆಶ್ವದಳಕ್ಕೆ ಫಿರಂಗಿ ತಾಲೀಮು

ಅಂಬಾರಿ‌ ಹೋರುವ ಆನೆಗೆ ವಿಶೇಷ ಆಹಾರ :ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಹಾಗೂ ಕುಮ್ಕಿ ಆನೆಗಳಿಗೆ ವಿಶೇಷವಾಗಿ ಕುಸುರಿ ಆಹಾರ ನೀಡಲಾಗುತ್ತದೆ. ಗರಿಕೆ ಹುಲ್ಲಿನಲ್ಲಿ ಗ್ಲೂಕೋಸ್ ಪೌಡರ್, ಅವಲಕ್ಕಿ, ಬೆಲ್ಲ, ತೆಂಗಿನಕಾಯಿಯನ್ನು ಕಟ್ಟಿ ಉಂಡೆ ಆಕಾರದಲ್ಲಿ ನೀಡುವುದೇ ಕುಸುರಿ ಆಹಾರವಾಗಿದೆ. ವಿಜಯ ದಶಮಿಯ ದಿನ ಈ‌ ಆಹಾರವನ್ನು ನೀಡಲಾಗುತ್ತದೆ. ಸೆ.13 ರಿಂದ ಅ.17ರವರೆಗೆ ಈ ಆನೆಗಳ ಆಹಾರಕ್ಕಾಗಿಯೇ ಸುಮಾರು 50 ಲಕ್ಷ ರೂ. ಹಣ ಖರ್ಚಾಗಲಿದೆ.

ಮೂರು ಬಾರಿ ಮಜ್ಜನ :ಬಿಸಿಲು ಹೆಚ್ಚಾಗಿರುವುದರಿಂದ ಆನೆಗಳಿಗೆ ದಿನಕ್ಕೆ ಮೂರು ಬಾರಿ ಸ್ನಾನ ಮಾಡಿಸಲಾಗುತ್ತದೆ. ಬೆಳಗ್ಗೆ ಸ್ನಾನ ಮುಗಿಸಿ ಆನೆಗಳನ್ನು ತಾಲೀಮಿಗೆ ಕರೆದೊಯ್ಯಲಾಗುತ್ತದೆ. ತಾಲೀಮು ಮುಗಿದ ಬಳಿಕ ಆನೆಗಳ‌ ಮೈಮೇಲೆ ನೀರು ಹಾಕುತ್ತಾರೆ. ಮತ್ತೆ ಮಧ್ಯಾಹ್ನ 12 ಗಂಟೆಗೆ 2ನೇ ಬಾರಿ ಸ್ನಾನ ಮಾಡಿಸಲಾಗುತ್ತದೆ. ಸಂಜೆ ತಾಲೀಮಿಗೂ ಮುನ್ನ ಸ್ನಾನ ಮಾಡಿಸಲಾಗುತ್ತದೆ.

ಗಜಪಡೆಗೆ ಫಿರಂಗಿ ತಾಲೀಮು :ಗಜಪಡೆ ಹಾಗೂ ಅಶ್ವಗಳು ಬೆದರದಂತೆ ಫಿರಂಗಿಗಳ ಮೂಲಕ ಕುಶಾಲತೋಪುಗಳನ್ನು ಸಿಡಿಸಿ ತಾಲೀಮು ನೀಡಲಾಗುತ್ತದೆ. ಸೆ.30ರಂದು ಫಿರಂಗಿ ಗಾಡಿಗಳಿಂದ ಕುಶಾಲ ತೋಪುಗಳನ್ನು ಸಿಡಿಸುವ ತಾಲೀಮು ನಡೆಸಲಾಯಿತು.

ಗಜಪಡೆಗೆ ಪ್ರತಿದಿನ ತಾಲೀಮು

ಅರಮನೆ ಹೊರ ಆವರಣದಲ್ಲಿರುವ ಕೋಟೆ ಮಾರಮ್ಮನವರ ದೇಗುಲದ ಬಳಿ ನಡೆದ ಕುಶಾಲತೋಪುಗಳನ್ನು ಸಿಡಿಸುವ ತಾಲೀಮು ನಡೆಯಿತು. ಇಂದು 7 ಫಿರಂಗಿ ಗಾಡಿಗಳಿಂದ‌ 21 ಕುಶಾಲತೋಪುಗಳನ್ನು ಸಿಎಆರ್ ಸಿಬ್ಬಂದಿ ಸಿಡಿಸಿದರು. ತಾಲೀಮಿನ ವೇಳೆ ಲಕ್ಷ್ಮಿ ಹಾಗೂ ಗೋಪಾಲಸ್ವಾಮಿ ಎರಡು ಆನೆಗಳು ಬೆಚ್ಚಿದರೆ, ಕುಶಾಲ‌ ತೋಪಿನ ಸದ್ದಿಗೆ ಅಶ್ವತ್ಥಾಮ ಗಾಬರಿಯಿಂದ ವಿಚಲಿತಗೊಂಡಿತು. ಉಳಿದೆಲ್ಲಾ ಆನೆಗಳು ಧೈರ್ಯದಿಂದ ಇದ್ದವು.

ಇದೇ ವೇಳೆ ಕೆಲವು ಅಶ್ವಗಳು ವಿಚಲಿತಗೊಂಡವು. ಅಕ್ಟೋಬರ್‌ 5 ಮತ್ತು 8 ರಂದು ಮತ್ತೆರಡು ಬಾರಿ ಕುಶಾಲತೋಪುಗಳನ್ನು ಸಿಡಿಸುವ ತಾಲೀಮು ನಡೆಯಲಿದೆ. ಆನೆಗಳು, ಅಶ್ವಗಳು ಬೆದರದಂತೆ ಸಕಲ ಸಿದ್ಧತೆ ನಡೆಸಲಾಗಿದೆ. ವಿಜಯದಶಮಿ ಜಂಬೂಸವಾರಿ ಮೆರವಣಿಗೆಯ ದಿನ ರಾಷ್ಟ್ರಗೀತೆ ನುಡಿಸುವ ವೇಳೆ 21 ಬಾರಿ ಕುಶಾಲತೋಪುಗಳನ್ನು ಸಿಡಿಸಿ ಗೌರವ ಸಲ್ಲಿಸಲು ಪೂರ್ವ ಸಿದ್ಧತೆ ನಡೆಯುತ್ತಿದೆ.

ಮರದ ಅಂಬಾರಿ ತಾಲೀಮು :ಅಕ್ಟೋಬರ್‌ 1ರಂದು ಅರಮನೆ ಆವರಣದಲ್ಲಿ ಕ್ಯಾಪ್ಟನ್ ಅಭಿಮನ್ಯುಗೆ ಮರದ ಅಂಬಾರಿ ಕಟ್ಟಿ ತಾಲೀಮು ಆರಂಭಿಸಲಾಯಿತು. ಇಂದು ಬೆಳಗ್ಗೆ 9.25 ರಿಂದ 10.30ರವರೆಗೆ ಶುಭ ಲಗ್ನದಲ್ಲಿ ಅರಮನೆ ಆವರಣದಲ್ಲಿ ಮರದ ಅಂಬಾರಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು. ಬಳಿಕ ಮರಳಿನ ಮೂಟೆಗಳ‌ ಮೇಲೆ ಚಿನ್ನದ ಅಂಬಾರಿ ಮಾದರಿಯ ಮರದ ಅಂಬಾರಿ ಕಟ್ಟಲಾಯಿತು. ಮರದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಅಭಿಮನ್ಯುವಿಗೆ ಕಾವೇರಿ, ಚೈತ್ರಾ, ಗೋಪಾಲಸ್ವಾಮಿ, ಧನಂಜಯ, ಅಶ್ವತ್ಥಾಮ, ವಿಕ್ರಮ ಸಾಥ್ ನೀಡಿದವು.

ಫಿರಂಗಿಗಳ ಮೂಲಕ ಕುಶಾಲತೋಪುಗಳನ್ನು ಸಿಡಿಸಿ ತಾಲೀಮು

ಅರಮನೆ ಮುಂಭಾಗ ಸಾಂಸ್ಕೃತಿಕ ಕಾರ್ಯಕ್ರಮಗಳು :ನಾಡಹಬ್ಬ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಅ.10ರಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಅರಮನೆ ಮುಂಭಾಗದಲ್ಲಿ ನಡೆಯಲಿವೆ. ಈ ಬಾರಿ ನಾಡಹಬ್ಬವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಅ.7ರಂದು ನಾಡಹಬ್ಬ ದಸರಾಗೆ ಚಾಮುಂಡಿ ಬೆಟ್ಟದಲ್ಲಿ ಚಾಲನೆ ಸಿಗಲಿದೆ. ನಂತರ ಪ್ರತಿದಿನ ಅ.13ರವರೆಗೆ ಅರಮನೆ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.10ರಂದು ಅರಮನೆ ಮುಂಭಾಗದ ಸಾಂಸ್ಕೃತಿಕ ವೇದಿಕೆಯಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಿರಂತರ 12 ಗಂಟೆ ಕಾಲ ರಾಜ್ಯದ ನೂರಾರು ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.

ಆ ನಂತರ ಅ.7 ರಿಂದ ಅ.13ರವರೆಗೆ ನಿತ್ಯ ಸಂಜೆ 6 ರಿಂದ ರಾತ್ರಿ 9.30ರವರೆಗೆ ಅರಮನೆ ಮುಂಭಾಗದ ಸಾಂಸ್ಕೃತಿಕ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಅ.11ಕ್ಕೆ ಪೊಲೀಸ್ ಬ್ಯಾಂಡ್ ಕಾರ್ಯಕ್ರಮದ ಮೊದಲ ದಿನ ಸಂಜೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಅಂದು ಪ್ರಸಿದ್ಧ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ಅ.11ರಂದು ಪೊಲೀಸ್ ಬ್ಯಾಂಡ್ ಕಾರ್ಯಕ್ರಮ ನಡೆಯಲಿದೆ. ಅ.13 ರಂದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ.

ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ :ಈ ಬಾರಿ ನಾಡಹಬ್ಬ ದಸರಾಗೆ ಚಾಮುಂಡಿ ಬೆಟ್ಟದಲ್ಲಿ ಅ.7ರಂದು ಬೆಳಗ್ಗೆ 8.15ರ ಶುಭ ಲಗ್ನದಲ್ಲಿ ನಾಡ ಅಧಿದೇವತೆ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಗುವುದು. ದಸರಾಗೆ ಮಾಜಿ ಸಿಎಂ ಹಾಗೂ ಬಿಜೆಪಿಯ ಹಿರಿಯ ನಾಯಕ ಎಸ್ಎಂ ಕೃಷ್ಣ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಗಣ್ಯರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ದಸರಾ ಜಂಬೂಸವಾರಿ ವಿವರ :ನಾಡಹಬ್ಬ ದಸರಾ ಪ್ರಮುಖ ಆಕರ್ಷಣೆ ಜಂಬೂಸವಾರಿ ಅ.15ರಂದು ಅರಮನೆ ಆವರಣದಲ್ಲಿ ನಡೆಯಲಿದೆ. ಅಂದು ಸಂಜೆ 4.36 ರಿಂದ 4.46ರೊಳಗಿನ ಶುಭ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ. 5 ಗಂಟೆಯಿಂದ 5.30ರೊಳಗಿನ ಶುಭ ಲಗ್ನದಲ್ಲಿ ನಾಡ ಅಧಿದೇವತೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿ ಇರುವ ಚಿನ್ನದ ಅಂಬಾರಿಗೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.

ಈ ಬಾರಿಯ ಮೆರವಣಿಗೆಯಲ್ಲಿ ಮೂರು ಸ್ತಬ್ಧ ಚಿತ್ರಗಳಿರಲಿವೆ. 75ನೇ ಸ್ವಾತಂತ್ರ್ಯ ದಿನಾಚರಣೆ ಸ್ತಬ್ಧ ಚಿತ್ರ, ಕೊರೊನಾ ಮಾಹಿತಿ ಸ್ತಬ್ಧ ಚಿತ್ರ ಹಾಗೂ ಪೊಲೀಸ್ ಬ್ಯಾಂಡ್ ವಾಹನ ಇರಲಿದೆ. ಗಜಪಡೆಯನ್ನು ಜಂಬೂಸವಾರಿಗೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಡಿಸಿಎಫ್ ಕರಿಕಾಳನ್ ವಿವರಿಸಿದ್ದಾರೆ.

ದರ್ಬಾರ್ ಹಾಲ್​ನಲ್ಲಿ ಚಿನ್ನದ ಸಿಂಹಾಸನ ಜೋಡಣೆ :ಶರನ್ನವರಾತ್ರಿಯಲ್ಲಿ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲು ದರ್ಬಾರ್ ಹಾಲ್​ನಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಮಾಡಲಾಯಿತು.

ಅ.1ರ ಶುಭ ಶುಕ್ರವಾರದ ಭಾದ್ರಪದ ಮಾಸದ ಕೃಷ್ಣ ಪಕ್ಷ. ದಶಮಿಯ ಶುಭ ತುಲಾ ಲಗ್ನದಲ್ಲಿ ಬೆಳಗ್ಗೆ 9.15ರಿಂದ 9.30ರವರೆಗಿನ ಸಮಯದಲ್ಲಿ ಅರಮನೆಯ ದರ್ಬಾರ್ ಹಾಲ್​ನಲ್ಲಿ ಚಿನ್ನದ ಸಿಂಹಾಸನ ಹಾಗೂ ಕನ್ನಡಿತೊಟ್ಟಿಯಲ್ಲಿ ಬೆಳ್ಳಿಯ ಭದ್ರಾಸನ ಜೋಡಣೆ ಮಾಡಲಾಯಿತು. ಇದಕ್ಕೂ ಮುನ್ನ ಬೆಳಗ್ಗೆ ಅರಮನೆಯೊಳಗೆ ಪೂಜಾ ಕೈಂಕರ್ಯಗಳು, ಹೋಮ‌-ಹವನಗಳನ್ನು ರಾಜಮನೆತನದ ರಾಜ ಪುರೋಹಿತರು ನೆರವೇರಿಸಿ, ಶಾಂತಿ ಹೋಮ ಮಾಡಿದರು. ಆ ನಂತರ ಸಿಂಹಾಸನ ಜೋಡಣೆ ಮಾಡಲಾಯಿತು.

ದರ್ಬಾರ್ ಹಾಲ್​ನಲ್ಲಿ ಚಿನ್ನದ ಸಿಂಹಾಸನ ಜೋಡಣೆ

ಅ.7ರಿಂದ ಖಾಸಗಿ ದರ್ಬಾರ್ :ಈ ಬಾರಿ ಅರಮನೆಯ ಶರನ್ನವರಾತ್ರಿ ಅ.7ರಿಂದ ಆರಂಭವಾಗಲಿದೆ. ಅಂದು ಈ ರತ್ನಖಚಿತ ಸಿಂಹಾಸನಕ್ಕೆ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಿ ರಾಜಪರಂಪರೆಯಂತೆ ಶರನ್ನವರಾತ್ರಿಯಲ್ಲಿ ಪ್ರತಿದಿನ ಖಾಸಗಿ ದರ್ಬಾರ್ ನಡೆಸುತ್ತಾರೆ.

ಈ ಬಾರಿಯ ಖಾಸಗಿ ದರ್ಬಾರ್​ಗೆ ಪ್ರವಾಸಿಗರು, ಸಾರ್ವಜನಿಕರು ಸೇರಿ ಎಲ್ಲರಿಗೂ ನಿರ್ಬಂಧ ವಿಧಿಸಲಾಗಿದೆ. ಕೇವಲ ರಾಜಮನೆತನದವರು ಮಾತ್ರ ಸಾಂಪ್ರದಾಯಿಕ ಪೂಜೆ ಸಲ್ಲಿಸಲಿದ್ದಾರೆ. ಅ.1 ರಿಂದ ಅ.31ರವರೆಗೆ ದರ್ಬಾರ್ ಹಾಲ್​ನಲ್ಲಿಯೇ ರತ್ನಖಚಿತ ಸಿಂಹಾಸನವಿರುತ್ತದೆ. ಬಳಿಕ ಅ.31ರಂದು ಸಿಂಹಾಸನ ವಿಸರ್ಜನೆ ಮಾಡುತ್ತಾರೆ.

ಪೂಜಾ ವಿಧಿವಿಧಾನಗಳ ವಿವರ :ಅ.7 ರಿಂದ 15ರವರೆಗೆ ಅರಮನೆಯ ಒಳಗೆ ರಾಜ ಪರಂಪರೆಯಂತೆ ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಧಾರ್ಮಿಕ ಕಾರ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ. ಯಾವುದೇ ಸಾರ್ವಜನಿಕರಿಗೆ ಹಾಗೂ ಇತರರಿಗೆ ಪ್ರವೇಶವಿಲ್ಲ. ಎಲ್ಲಾ ಪೂಜಾ ವಿಧಿ‌ವಿಧಾನಗಳು ನಡೆಯಲಿವೆ. ಅ.7ರಂದು ರತ್ನಖಚಿತ ‌ಸಿಂಹಾಸನಕ್ಕೆ ಪೂಜೆ‌ ಸಲ್ಲಿಸಿ‌ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

‌ಅ.14 ರಂದು 11.02 ರಿಂದ 11.22ರ ಶುಭ ಲಗ್ನದಲ್ಲಿ ಯದುವೀರ್ ಆಯುಧ ಪೂಜೆ ನಡೆಸಲಿದ್ದಾರೆ. ಅ.15ರಂದು ಕಲ್ಯಾಣ ತೊಟ್ಟಿಯಲ್ಲಿ ಅರಮನೆಯ ಆನೆ, ಕುದುರೆ, ಒಂಟೆ, ಹಸು ಸೇರಿದಂತೆ ಎಲ್ಲಾ ವಾಹನಗಳಿಗೂ ಪೂಜೆ ಸಲ್ಲಿಸಿ ನಂತರ ವಿಜಯದಶಮಿಯಂದು ಬನ್ನಿಪೂಜೆ ಸಲ್ಲಿಸುವ ಮೂಲಕ ನೆರವೇರಿಸಲಿದ್ದಾರೆ. ಆದರೆ, ಈ ಬಾರಿ ಸಾಂಪ್ರದಾಯಿಕ ಜಟ್ಟಿ ಕಾಳಗ ನಡೆಯುವುದಿಲ್ಲ.

Last Updated : Oct 1, 2021, 10:34 PM IST

ABOUT THE AUTHOR

...view details