ಮೈಸೂರು: ರಾಜ್ಯದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಗಳ ಪ್ರಾಯೋಗಿಕ ಸರ್ವೇಯನ್ನು ಮೈಸೂರು ಮತ್ತು ವಿಜಯಪುರದಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು. ಒಂದೆರೆಡು ದಿನಗಳಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಲಿದ್ದಾರೆ ಎಂದು ಮೈಸೂರಿನ ತೃತೀಯ ಲಿಂಗಿ ಸವೆನ್ ರೈನ್ ಬೋ ಸಂಘದ ಅಧ್ಯಕ್ಷೆ ಪ್ರಣತಿ ಪ್ರಕಾಶ್ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ‘‘ನಾವು ಜನ ಗಣತಿ ಗಂಡು ಹೆಣ್ಣಿನ ಗಣತಿ, ಹುಲಿ ಗಣತಿ ಸೇರಿದಂತೆ ಹಲವು ಗಣತಿಗಳನ್ನ ಕೇಳಿದ್ದೇವೆ. ಅದೇ ರೀತಿ ನಮ್ಮ ಗಣತಿಯನ್ನು ನಡೆಸಿ. ನಮಗೂ ಸರ್ಕಾರದ ಸೌಲಭ್ಯ ಸೇರಿದಂತೆ ಒಂದು ಗುರುತಿನ ಚೀಟಿ ನೀಡಿ ಎಂದು ಕಳೆದ 16 ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಈಗ ತೃತೀಯ ಲಿಂಗಿಗಳ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಇದರ ಅಂಗವಾಗಿ ಮೊದಲ ಬಾರಿಗೆ ಮೈಸೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತೃತೀಯ ಲಿಂಗಿಗಳ ಪ್ರಾಯೋಗಿಕ ಗಣತಿ ಕಾರ್ಯವನ್ನು ಮಾರ್ಚ್ 12 ಅಥವಾ 13ನೇ ತಾರೀಖಿನಿಂದ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸಂಕ್ಷೀಪ್ತವಾಗಿ ಮಾಹಿತಿ ನೀಡಲಿದ್ದಾರೆ ಎಂದು ಪ್ರಣತಿ ಪ್ರಕಾಶ್ ಮಾಹಿತಿ ನೀಡಿದರು.
ತೃತೀಯ ಲಿಂಗಿಗಳ ಸರ್ವೆಯಿಂದ ಆಗುವ ಪ್ರಯೋಜನಗಳೇನು:ಮೈಸೂರು ಜಿಲ್ಲೆಯಲ್ಲಿ ಅಂದಾಜು 1400 ತೃತೀಯ ಲಿಂಗಿಗಳು ಇದ್ದಾರೆ ಎನ್ನಲಾಗಿದೆ. ಆದರೆ, ಖಚಿತವಾಗಿ ಎಷ್ಟು ಜನ ಇದ್ದಾರೆ ಎಂಬುದು ಗೊತ್ತಿಲ್ಲ. ಈ ಸರ್ವೇಯಿಂದ ಎಷ್ಟು ಜನ ತೃತೀಯ ಲಿಂಗಿಗಳು ಜಿಲ್ಲೆಯಲ್ಲಿ ಇದ್ದಾರೆ ಎಂಬುದನ್ನು ಕಂಡು ಹಿಡಿಯಬಹುದು. ಇದರ ಜೊತೆಗೆ ಈ ಸರ್ವೇ ಮಾಡಿ ಒಂದು ಗುರುತಿನ ಚೀಟಿಯನ್ನು ಅವರಿಗೆ ನೀಡಿದರೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ ಹಾಗೂ ತೃತೀಯ ಲಿಂಗಿಗಳು ಎಂದು ಹೇಳಿಕೊಂಡು ಜನರನ್ನು ಸುಲಿಗೆ ಮಾಡುವುದನ್ನ ತಪ್ಪಿಸಬಹುದು, ಈಗಾಗಲೇ ಆಧಾರ್ ಕಾರ್ಡ್ ಹೊಂದಿರುವ ತೃತೀಯ ಲಿಂಗಿಗಳಿಗೆ ಇದೊಂದು ಗುರುತಿನ ಚೀಟಿ ತರ ತೊಂದರೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.