ಮೈಸೂರು: ಎರಡು ವರ್ಷಗಳ ಬಳಿಕ ಭಕ್ತಾದಿಗಳಿಗೆ ಆಷಾಢ ಮಾಸದ ಶುಕ್ರವಾರದಂದು ಚಾಮುಂಡಿ ತಾಯಿಯ ದರ್ಶನಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಬೇಕಿರುವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಆಷಾಢ ಮಾಸದ ಶುಕ್ರವಾರದಂದು ಚಾಮುಂಡಿ ತಾಯಿಯ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶವಿರಲಿಲ್ಲ. ಆದರೆ ಕೋವಿಡ್ ನಂತರ ಈ ವರ್ಷದ ನಾಲ್ಕು ಆಷಾಢ ಶುಕ್ರವಾರ ಹಾಗೂ ಚಾಮುಂಡೇಶ್ವರಿ ತಾಯಿಯ ಹುಟ್ಟಿದ ಹಬ್ಬದ ದಿನ ಭಕ್ತಾದಿಗಳಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.
ಜುಲೈ 1ರ ಆಷಾಢ ಮಾಸದ ಮೊದಲ ಶುಕ್ರವಾರದಂದು ಮುಂಜಾನೆ 5.30ರಿಂದಲೇ ಚಾಮುಂಡೇಶ್ವರಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ರಾತ್ರಿ 9.30 ವರೆಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಳೆ ಮುಂಜಾನೆ 3.30 ಕ್ಕೆ ಆಷಾಢ ಮಾಸದ ವಿಶೇಷ ಪೂಜೆಗಳು ಆರಂಭವಾಗಲಿದ್ದು, ಚಾಮುಂಡಿ ತಾಯಿಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಅಲಂಕಾರ ಮಾಡಲಾಗುತ್ತದೆ.
"ಆಷಾಢ ಮಾಸದಂದು ಕುಟುಂಬಸಮೇತ ಶಕ್ತಿದೇವಿಯ ದರ್ಶನ ಪಡೆದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಹಾಗಾಗಿ, ಹೆಚ್ಚಿನ ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸುತ್ತಾರೆ" ಎಂದು ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಹೇಳಿದರು.
ಭಕ್ತಾದಿಗಳಿಗೆ ಉಚಿತ ಬಸ್ ಸೇವೆ:ಖಾಸಗಿ ವಾಹನಗಳಿಗೆ ಸಂಚಾರ ನಿಷೇಧಿಸಲಾಗಿದ್ದು, ಬೆಟ್ಟಕ್ಕೆ ಬರುವ ಭಕ್ತರಿಗೆ ಉಚಿತವಾಗಿ ಲಲಿತ್ ಮಹಲ್ ಮೈದಾನದಿಂದ ಉಚಿತ ಬಸ್ ಸೇವೆ ಒದಗಿಸಲಾಗಿದೆ. ಮುಂಜಾನೆ 3 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬಸ್ ವ್ಯವಸ್ಥೆ ಇರಲಿದೆ. ಭಕ್ತರಿಗೆ ಸರತಿ ಸಾಲಿನಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ವಿಶೇಷ ದರ್ಶನ ಪಡೆಯಲು 300 ರೂಪಾಯಿ ಹಾಗೂ 50 ರೂಪಾಯಿಗೆ ಧರ್ಮ ದರ್ಶನಕ್ಕೆ ಅವಕಾಶವಿದೆ.
ಹೊರಗಡೆ ಭಕ್ತಾದಿಗಳ ಅನುಕೂಲಕ್ಕಾಗಿ 20 ಎಲ್ಇಡಿ ಹಾಕಲಾಗಿದೆ. ದೇವಸ್ಥಾನದ ಪಕ್ಕದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ:'ಪ್ರೀತಿಯಿದ್ದ ಕಡೆ ನಾನಿರುತ್ತೇನೆ': ರಾಜಕೀಯ ಪ್ರವೇಶ ಬಗ್ಗೆ ಅಭಿಷೇಕ್ ಅಂಬರೀಶ್ ಪ್ರತಿಕ್ರಿಯೆ