ಮೈಸೂರು: ನೂಪುರ್ ಶರ್ಮಾ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕಾಗಿ ಟೈಲರ್ವೊಬ್ಬರನ್ನು ಕೊಲೆ ಮಾಡಿರುವುದು ಪೈಶಾಚಿಕ ಕೃತ್ಯ. ಇದು ಮುಸ್ಲಿಂ ಮೂಲಭೂತವಾದಿಗಳಿಂದ ದೇಶದ ಶಾಂತಿ ಕೆಡಿಸುವ ಯತ್ನ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದನಗಳ್ಳರಿಗೆ ಎರಡೇಟು ಬಿದ್ದರೆ ಆಕಾಶ ಭೂಮಿ ಒಂದಾಗುವ ರೀತಿ ಬೊಬ್ಬೆ ಹಾಕುವವರು ಈಗ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ? ಬ್ರದರ್, ಬ್ರದರ್ ಎಂದು ಹೇಳುವ ಕಾಂಗ್ರೆಸ್ ನಾಯಕರು ಈಗ ಯಾವ ಬಿಲದಲ್ಲಿ ಅಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟ್ವೀಟ್ ಮಾಡಿ ಮನೆಯೊಳಗೆ ಕುಳಿತರೆ ಮುಗೀತಾ ನಿಮ್ಮ ಕೆಲಸ?. ಕರ್ನಾಟಕದಲ್ಲೂ ಕಾಂಗ್ರೆಸ್ಗೆ ಅಧಿಕಾರ ಕೊಟ್ಟರೆ ರಾಜಸ್ಥಾನದ ಘಟನೆ ಇಲ್ಲಿಯೂ ಆಗುತ್ತೆ. ಇದು ರಾಜ್ಯದ ಜನರಿಗೆ ಎಚ್ಚರಿಕೆ ಗಂಟೆ ಎಂದು ಕಿಡಿಕಾರಿದರು.
ಟಿಪ್ಪು ಸಂತತಿಗಳ ಬಗ್ಗೆ ಮತದಾರರು ಜಾಗೃತರಾಗಿರಬೇಕು. ರಾಜಸ್ಥಾನ ಸರ್ಕಾರದ ಮೇಲೆ ನನಗೆ ವಿಶ್ವಾಸವಿಲ್ಲ. ಹಿಂದೂಗಳ ಧ್ವನಿ ಅಡಗಿಸಲು ಈ ಕೃತ್ಯ ನಡೆದಿದೆ. ಈ ಕೃತ್ಯದ ಹಿಂದೆ ಕಾಂಗ್ರೆಸ್ ಇದೆ. ಕಾಂಗ್ರೆಸ್ನವರ ಮುಸ್ಲಿಂ ಓಲೈಕೆಯಿಂದ ಈ ರೀತಿ ನಡೆಯುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಫತ್ವಾ ಹೊರಡಿಸಲಿ ನೋಡೋಣ?: ಸಿದ್ದರಾಮಯ್ಯ ಸರ್ ರಾಜಸ್ಥಾನ ಸರ್ಕಾರಕ್ಕೆ ಸ್ವಲ್ಪ ಬುದ್ದಿ ಹೇಳುತ್ತೀರಾ, ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ. ಆದರೆ, ಭಯೋತ್ಪಾದಕರೆಲ್ಲಾ ಮುಸ್ಲಿಮರು. ಒಳ್ಳೆಯ ಮುಸ್ಲಿಮರು ಯಾಕೆ ಈಗ ಮಾತಾಡ್ತಿಲ್ಲ. ಒಳ್ಳೆಯ ಮುಸ್ಲಿಮರು ಮೌನವಾಗಿ ಇದಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರಾ? ಇನ್ನೂ ನೀವು ಧ್ವನಿ ಎತ್ತದಿದ್ದರೆ ನಿಮ್ಮ ಮೇಲೂ ಅನುಮಾನ ಮೂಡುತ್ತೆ. ಈಗ ಮೌಲ್ವಿಗಳು, ಮುಲ್ಲಾಗಳು ಎಲ್ಲಿ ಹೋಗಿದ್ದಾರೆ?. ಈ ಕೊಲೆ ತಪ್ಪು ಅಂತಾ ಆರೋಪಿಗಳ ವಿರುದ್ಧ ಫತ್ವಾ ಹೊರಡಿಸಲಿ ನೋಡೋಣ?. ಶುಕ್ರವಾರ ಪ್ರಾರ್ಥನೆಯಾದ ನಂತರ ಕಲ್ಲು ಬಿಸಾಕುವುದನ್ನು ಹೇಳಿ ಕೊಡುವುದಷ್ಟೇ ನಿಮ್ಮ ಕೆಲಸವಾ? ಎಂದು ವಾಗ್ದಾಳಿ ನಡೆಸಿದರು.
ಕನ್ನಯ್ಯ ಲಾಲ್ ಹತ್ಯೆ ಪ್ರಕರಣದ ಹಿಂದೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ, ದೇಶದ್ರೋಹಿಗಳನ್ನು ಬೆಳೆಯೋಕೆ ಬಿಟ್ಟಿರುವುದು ಇದಕ್ಕೆ ಕಾರಣವಾಗಿದೆ. ರಾಜಸ್ಥಾನ ಸರ್ಕಾರದ ಬಗ್ಗೆ ನಮಗೆ ಯಾವುದೇ ವಿಶ್ವಾಸ ಇಲ್ಲ. ಈ ಘಟನೆಯ ಹಿಂದೆ ಕಾಂಗ್ರೆಸ್ ಇದೆ. ಹಿಂದೂಗಳ ಧ್ವನಿಯನ್ನು ಅಡಗಿಸಲು ಯಾರನ್ನು ಬಳಸಿಕೊಳ್ಳುತ್ತಾರೆ ಅನ್ನೋದು ಈ ಘಟನೆಯಿಂದ ಗೊತ್ತಾಗಲಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ:ರಾಷ್ಟ್ರಪತಿ ಚುನಾವಣೆ : ದ್ರೌಪದಿ ಮುರ್ಮುಗೆ ಬೆಂಬಲದ ಸುಳಿವು ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ