ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮೈಸೂರು:''ಸಂಸದ ಪ್ರತಾಪ್ ಸಿಂಹ ಅವರಿಗೆ ಸೋಲಿನ ಭೀತಿಯಿಂದ ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ. ಅವರು 2 ಲಕ್ಷ ಮತಗಳಿಂದ ಗೆಲ್ಲುತ್ತೇನೆ ಎಂದು ಹೇಳಿದ್ದಾರಲ್ಲ, ಅದೇ ಎರಡು ಲಕ್ಷ ಮತಗಳಿಂದ ಸೋಲು ಅನುಭವಿಸುತ್ತಾರೆ'' ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಪ್ರತಾಪ್ ಸಿಂಹ ನಮ್ಮ ಸರ್ಕಾರದ ಅವಧಿಯಲ್ಲಿ ತಂದ ಯೋಜನೆಗಳನ್ನು ನಾನು ತಂದೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಕೇಂದ್ರದಿಂದ ನೀವು ಏನು ತಂದಿದ್ದೀರಿ ಎಂದು ಜನರ ಮುಂದೆ ಹೇಳಿ. ರಾಜ್ಯದಲ್ಲಿ ಉಡಾನ್ ಯೋಜನೆಯಡಿ ಪ್ರತಿ ಜಿಲ್ಲೆಗೂ ವಾಯು ಸಾರಿಗೆ ಸಂಪರ್ಕ ಕೊಡುತ್ತೇವೆ ಎಂದು ಭರವಸೆ ನೀಡಿದ್ದಿರಿ. ಆದರೆ, ಎಲ್ಲಿ ಮಾಡಿದ್ದೀರಿ? ಮೈಸೂರು ಕುಶಾಲನಗರ ಹೈವೇ ಕಾಮಗಾರಿ ಏನಾಯಿತು? ನಾಗನಹಳ್ಳಿ ರೈಲ್ವೆ ನಿಲ್ದಾಣದ ಅಭಿವೃದ್ಧಿ ಹಾಗೇ ನಿಂತಿದೆ. ಸೆಮಿ ಕಂಡಕ್ಟರ್ ಉತ್ಪಾದನೆ ಘಟಕ ಎಲ್ಲೋಯ್ತು? ನೀವು ರಾಜ್ಯಕ್ಕೆ ಯಾವ ಯೋಜನೆ ತಂದಿದ್ದೀರಿ ಎಂದು ಪಟ್ಟಿ ಬಿಡುಗಡೆ ಮಾಡಿ'' ಎಂದು ಸವಾಲು ಹಾಕಿದರು. ''ಮಡಿಕೇರಿಯಲ್ಲಿ ಪೊಲೀಸರಿಗೆ ಧಮ್ಕಿ ಹಾಕುವ ಕೆಲಸ ಮಾಡಿದ್ದಾರೆ. ಇವರ ಮೇಲೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಬೇಕಿತ್ತು'' ಎಂದರು.
ಕಳೆದ ಅವಧಿಯ ಶ್ವೇತಪತ್ರ ಹೊರಡಿಸಿ-ಎಂ. ಲಕ್ಷ್ಮಣ್:''ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು ಎನ್ನುತ್ತಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 75 ಸಾವಿರ ಕೋಟಿ ಸಾಲ ಮಾಡಿದ್ದಾರೆ. 2018ರಿಂದ 2023ರ ಮಾರ್ಚ್ವರಗೆ 2.18 ಲಕ್ಷ ಕೋಟಿ ಸಾಲ ಮಾಡಲಾಗಿದೆ. 5 ವರ್ಷದ ಬಿಜೆಪಿ ಸರ್ಕಾರದಲ್ಲಿ ಪ್ರತಿಯೊಬ್ಬರ ಮೇಲೆ 1.40 ಲಕ್ಷ ಸಾಲ ಹೊರಿಸಿದ್ದಾರೆ. ಪ್ರಧಾನಿ ಮೋದಿ ಪ್ರಚಾರಕ್ಕಾಗಿ ರಾಜ್ಯಕ್ಕೆ ಬರಲು ರಾಜ್ಯ ಸರ್ಕಾರದ 46 ಕೋಟಿ ಖರ್ಚು ಮಾಡಿದ್ದಾರೆ. 2023ನೇ ಸಾಲಿನಲ್ಲಿ ಪಂಚಾಯತ್ ರಾಜ್ ಇಲಾಖೆ, ಪಿಡಬ್ಲ್ಯೂಡಿ ಇಲಾಖೆ ಟೆಂಡರ್ನಲ್ಲಿ ಲಕ್ಷಾಂತರ ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ. ಇದು ಬಿಜೆಪಿ ಅವಧಿಯ ಶ್ವೇತ ಪತ್ರ. ಸಿಎಂ ಸಿದ್ದರಾಮಯ್ಯ 6 ತಿಂಗಳ ಅವಧಿಯ ಶ್ವೇತ ಪತ್ರ ಕೊಡುತ್ತಾರೆ. ನೀವು ಕಳೆದ ಸರ್ಕಾರದ ಅವಧಿಯ ಶ್ವೇತ ಪತ್ರ ಹೊರಡಿಸಿ'' ಎಂದು ಗರಂ ಆದರು. ''ಸಿದ್ದರಾಮಯ್ಯ ಅವರನ್ನು ಹಣಕಾಸು ವಿಚಾರದಲ್ಲಿ ಎದುರಿಸಲು ನಿಮ್ಮಿಂದ ಆಗುವುದಿಲ್ಲ. ಅಂಕಿ ಅಂಶ, ದಾಖಲೆ ಇಟ್ಟುಕೊಂಡು ಆರೋಪ ಮಾಡಿ. ಮಾತನಾಡುವಾಗ ನಾಲಿಗೆ ಮೇಲೆ ನಿಗಾ ಇರಲಿ ಎಂದು ವಾಗ್ದಾಳಿ ನಡೆಸಿದರು.
ಜನತಾ ದರ್ಶನ ಟೀಕೆ ಸರಿಯಲ್ಲ:ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಮಾತನಾಡಿ, ''ಸಿಎಂ ಜನತಾ ದರ್ಶನವನ್ನು ಟೀಕೆ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರು ಇಳಿ ವಯಸ್ಸಿನಲ್ಲೂ ದಿನವಿಡೀ ಕುಳಿತು ಜನತಾ ದರ್ಶನ ಮಾಡಿದ್ದಾರೆ. ದೇಶದ ಯಾವ ಸಿಎಂ ಕೂಡ ಈ ರೀತಿ ಮಾಡಿಲ್ಲ. ಇದಕ್ಕೆ ವಿಪಕ್ಷಗಳು ಟೀಕೆ ಮಾಡುವ ಬದಲು ಮೆಚ್ಚುಗೆ ವ್ಯಕ್ತಪಡಿಸಬೇಕಿತ್ತು. ಆದರೆ, ರಾಜಕೀಯ ದೃಷ್ಟಿಯಿಂದ ಟೀಕಿಸುವುದು ಬಿಜೆಪಿಯವರ ಗುಣವಾಗಿದೆ. ಜನರ ನೋವು ನಲಿವಿಗೆ ಸ್ಪಂದಿಸುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಇದನ್ನು ಸಾಧ್ಯವಾದರೆ, ಪ್ರತಿ ತಿಂಗಳು ಮಾಡಬೇಕು. ಈ ವಿಚಾರವನ್ನು ಮಾಧ್ಯಮಗಳು ಮುಕ್ತ ಕಂಠದಿಂದ ಹೊಗಳಿವೆ. ಒಳ್ಳೆ ಕೆಲಸ ಮಾಡಿದರೆ ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸುವುದು ಒಳ್ಳೆಯ ಗುಣ. ಮುಖ್ಯಮಂತ್ರಿಗಳ ಈ ಕೆಲಸಕ್ಕೆ ರಾಜ್ಯದ ಎಲ್ಲಾ ಜಿಲ್ಲಾ ಕಾಂಗ್ರೆಸ್ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇದು ನಮ್ಮ ಸರ್ಕಾರ ಇರುವವರೆಗೂ ಮುಂದುವರಿಬೇಕು. ಬಿಜೆಪಿ ಟೀಕೆ ಮಾಡುವುದನ್ನು ಬಿಟ್ಟು ಒಳ್ಳೆ ಕೆಲಸಕ್ಕೆ ಪ್ರಶಂಸೆ ಮಾಡುವುದನ್ನು ಕಲಿಯಬೇಕು'' ಎಂದು ಕಿಡಿಕಾರಿದರು. ನಗರಾಧ್ಯಕ್ಷ ಆರ್.ಮೂರ್ತಿ, ಮಾಧ್ಯಮ ವಕ್ತಾರ ಕೆ.ಮಹೇಶ್ ಸುದ್ದಿಗೋಷ್ಠಿಯಲ್ಲಿ ಇದ್ದರು.
ಇದನ್ನೂ ಓದಿ:ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಸೊಕ್ಕು ಮುರಿಯುವ ಕೆಲಸ ಮಾಡುತ್ತೇವೆ: ಬಿ.ವೈ.ವಿಜಯೇಂದ್ರ