ಮೈಸೂರು: ಅಮೂಲ್ ಮತ್ತು ಕೆಎಂಎಫ್ನ್ನು ವಿಲೀನ ಮಾಡುತ್ತಿಲ್ಲ. ಈ ತರ ಸುಳ್ಳು ಅಪಪ್ರಚಾರವನ್ನು ಮಾಡಬೇಡಿ. ಕೆಎಂಎಫ್ ನವರು ಕೂಡ ಪದೇ ಪದೇ ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆ ಮಾಡಿ ಜನಕ್ಕೆ ಸ್ಪಷ್ಟನೆಯನ್ನೂ ಕೊಟ್ಟಿದ್ದರೂ ಕೂಡ, ಕಾಂಗ್ರೆಸ್ ಮತ್ತು ಜೆಡಿಎಸ್ ಸುಳ್ಳು ಆರೋಪವನ್ನೇ ಪುನರಾವರ್ತನೆ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪಸಿಂಹ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಅಮೂಲ್ನೊಂದಿಗೆ ನಂದಿನಿ ವಿಲೀನಗೊಳಿಸಲಾಗುತ್ತಿದೆ ಎಂಬ ಚರ್ಚೆ ದೊಡ್ಡಮಟ್ಟದಲ್ಲಿ ಆಗುತ್ತಿದೆ. ಸಂಗತಿ ನಿಜವೇ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಇಷ್ಟು ದಿನದವರೆಗೆ ಹಿಂದಿ ಹೇರಿಕೆ ಅಂದರು, ಈಗ ಅಮೂಲ್ ಹೇರಿಕೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನವರಿಗೆ ಕೇಳಲು ಬಯಸುತ್ತೇನೆ.. ಸ್ವಾಮಿ ಸಿದ್ದರಾಮಯ್ಯನವರೆ, ಕುಮಾರಸ್ವಾಮಿಯವರೇ, ಜೆಡಿಎಸ್ ನವರೇ ಕಾಂಗ್ರೆಸ್ ನವರೇ ಈ ದೊಡ್ಲಾ, ಮಿಲ್ಕಿ ಮಿಸ್ಟ್, ಆರೋಕ್ಯ ಇವೆಲ್ಲ ನಂದಿನಿಯ ಅಕ್ಕ-ತಂಗಿಯರಾ? ಅಣ್ಣ ತಮ್ಮಂದಿರಾ?, ಅಥವಾ ತಮಿಳುನಾಡಿನಿಂದ, ಆಂಧ್ರದಿಂದ, ತೆಲಂಗಾಣದಿಂದ ಕರ್ನಾಟಕಕ್ಕೆ ಮದುವೆಯಾಗಿ ಬಂದಿರುವ ನಂದಿನಿಯ ಸೊಸೆಯಂದಿರಾ? ಅಳಿಯಂದಿರಾ?ಎಂದು ಪ್ರಶ್ನಿಸಿದರು.
ಕೆಎಂಎಫ್ ಬಗ್ಗೆ ಕಾಳಜಿ ವಹಿಸಿದ್ದು ಬಿಜೆಪಿ- ಪ್ರತಾಪ್ ಸಿಂಹ: ಇಷ್ಟು ವರ್ಷದಿಂದ ದೊಡ್ಲಾ, ಆರೋಕ್ಯ ಇವೆಲ್ಲ ಕರ್ನಾಟಕದಲ್ಲಿ ಇಲ್ವಾ? ಅಥವಾ ಅಮೂಲ್ ಈಗಾಗಲೇ ಬಂದಿಲ್ವಾ? ಬಿಜೆಪಿ ಬಂದ ಮೇಲೆ ಅಮೂಲ್ ಬಂದಿರುವಂಥದ್ದಾ? ಇಷ್ಟಾಗಿಯೂ ಯಾಕೆ ಈ ರೀತಿ ಅಪಪ್ರಚಾರವನ್ನು ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು. ಹಾಲು ಉತ್ಪಾದನೆ ಬಗ್ಗೆ, ನಂದಿನಿ ಬಗ್ಗೆ, ಕರ್ನಾಟಕ ಮಿಲ್ಕ ಫೆಡರೇಷನ್ ಬಗ್ಗೆ ನಿಜವಾದ ಕಾಳಜಿಯನ್ನು ಹೊಂದಿರುವಂಥದ್ದು ಬಿಜೆಪಿಯವರು. ಮಾಜಿ ಸಿಎಂ ಯಡಿಯೂರಪ್ಪನವರು 2008ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಹಾಲಿಗೆ ಎರಡು ರೂಪಾಯಿ ಪ್ರೋತ್ಸಾಹ ಧನವನ್ನು ಕೊಟ್ಟಿದ್ದರು. ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಪ್ರೋತ್ಸಾಹಧನವನ್ನು ಐದು ರೂಪಾಯಿಗೆ ಏರಿಸಿದ್ದರು ಎಂದರು.
ಹಾಲುವ ಕೊಡುವ ಹಸುವನ್ನು ಕಡಿದು ತಿನ್ನೋರಿಗೆ ಪರಿಹಾರ ಕೊಟ್ಟಿದ್ದಿರಿ- ಸಂಸದ ಸಿಂಹ.. ಸಿದ್ದರಾಮಯ್ಯನವರೇ ಹಾಲು ಕೊಡುವ ಹಸುವನ್ನೇ ಕಡಿದು ತಿನ್ನೋಕೆ ಅಂತ ತೀರ್ಥಹಳ್ಳಿ ಹತ್ತಿರ ದನಗಳನ್ನು ತೆಗೆದುಕೊಂಡು ಹೋಗುತ್ತಿದ್ದನಲ್ಲ ದನಗಳ್ಳನ ಮೇಲೆ ಪೊಲೀಸರು ಗೋಲಿಬಾರ್ ಮಾಡಿ ಸಾಯಿಸಿದಾಗ ದನಗಳ್ಳನಿಗೆ ನೀವು ಪರಿಹಾರ ಕೊಟ್ಟು ಪೊಲೀಸ್ ಕಾನ್ಸಟೇಬಲ್ಗೆ ಸಸ್ಪೆನ್ಶನ್ ಬಳುವಳಿ ಕೊಟ್ಟವರು. ನಿಮಗೆ ಮತ್ತೇನಾದರೂ ಅಧಿಕಾರ ಕೊಟ್ಟು ಬಿಟ್ಟರೆ ಗೋಹತ್ಯೆಯನ್ನು ಮಾಡಿ ಗೋವನ್ನು ತಿನ್ನುವವರ ಸಂಖ್ಯೆ ಜಾಸ್ತಿಯಾಗಿ ಕೆಎಂಎಫ್ ಶಾಶ್ವತವಾಗಿ ಮುಚ್ಚಿಹೋಗತ್ತೆ. ಇದು ಕರ್ನಾಟಕದ ಜನತೆಗೆ ಗೊತ್ತಿದೆ. ದಯವಿಟ್ಟು ಈ ರೀತಿ ವ್ಯರ್ಥ ಆಲಾಪನೆಯನ್ನು ಮಾಡಬೇಡಿ ಎಂದು ಸಂಸದ ಪ್ರತಾಪ್ ಸಿಂಹ ಗುಡುಗಿದರು.