ಮೈಸೂರು: ನಂದಿ ಬೆಟ್ಟಕ್ಕೆ ಬೇಕಾದರೆ ರೋಪ್ ವೇ ಮಾಡಲಿ, ಆದರೆ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣದ ಅಗತ್ಯವಿಲ್ಲ. ರೋಪ್ ವೇ ನಿರ್ಮಿಸುವುದಕ್ಕೆ ನಮ್ಮ ಪ್ರಬಲ ವಿರೋಧವಿದೆ ಎಂದು ಮೈಸೂರಿನಲ್ಲಿ ಸಂಸದ ಪ್ರತಪ್ ಸಿಂಹ ಹೇಳಿದರು.
ಇಂದು ಜಲದರ್ಶಿನಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆಯೇ ಶಾಸಕ ಜಿ.ಟಿ.ದೇವೆಗೌಡ ಹಾಗೂ ನಾವೆಲ್ಲರೂ ಸೇರಿ ಸಭೆ ನಡೆಸಿ ಇದರ ಬಗ್ಗೆ ತೀರ್ಮಾನ ಕೈಗೊಂಡಿದ್ದೇವೆ. ಚಾಮುಂಡಿ ಬೆಟ್ಟ ಪ್ರೇಕ್ಷಣೀಯ ಸ್ಥಳವಲ್ಲ, ಧಾರ್ಮಿಕ ತಾಣ. ಇಲ್ಲಿಗೆ ಭಕ್ತಿ-ಭಾವದಿಂದ ಹೋಗಬೇಕು. ರೋಪ್ ವೇನಲ್ಲಿ ಹೋಗಿ ನೋಡುವಂತಹ ಸ್ಥಳ ಇದಲ್ಲ ಎಂದರು.
ವಿಕಸಿತ ಭಾರತ ಸಂಕಲ್ಪ ಯಾತ್ರೆ:ಕಳೆದ ನವೆಂಬರ್ 24ರಿಂದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ಪಿರಿಯಾಪಟ್ಟಣದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಜನರಿಗೆ ನೀಡಿದ ಯೋಜನೆಗಳ ಬಗ್ಗೆ ಯಾತ್ರೆಯಲ್ಲಿ ಮನವರಿಕೆ ಮಾಡಿಕೊಡಲಾಗುತ್ತಿದೆ. ಕೇಂದ್ರದ ಯೋಜನೆಗಳಿಂದ ವಂಚಿತರಾಗಿರುವವರಿಗೆ ಅದನ್ನು ತಲುಪಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಸುಮಾರು 300 ಸ್ಥಳಗಳಲ್ಲಿ ಯಾತ್ರೆ ನಡೆಯಲಿದೆ. ಜನವರಿ 24ರವರೆಗೆ ಯಾತ್ರೆ ನಡೆಯಲಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರತಾಪ್ ಸಿಂಹ ಮನವಿ ಮಾಡಿದರು.
ದಶಪಥ ಹೆದ್ದಾರಿ ನಿರ್ಮಾಣದಲ್ಲಿ ಸಿದ್ದರಾಮಯ್ಯ, ಮಹಾದೇವಪ್ಪರ ಪಾತ್ರವಿಲ್ಲ:ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯ ಕ್ರೆಡಿಟ್ ವಾರ್ ಮತ್ತೆ ಈಚೆಗೆ ಶುರುವಾಗಿದೆ. ಸಚಿವ ಮಹಾದೇವಪ್ಪ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಸಂಸದರು, ಹೈವೇ ಮಾಡಿಸಿದ್ದು ನಾನೇ. ಇದರ ನಿರ್ಮಾಣಕ್ಕೆ 8,500 ಕೋಟಿ ರೂ ವೆಚ್ಚವಾಗಿದೆ. ಇದಕ್ಕೆ ಈಗಿರುವ ರಾಜ್ಯ ಸರ್ಕಾರ ಎಂಟೂವರೆ ರೂಪಾಯಿ ಕೂಡ ಕೊಟ್ಟಿಲ್ಲ. ಹೈವೇ ನಿರ್ಮಿಸಿದ್ದು ಕೇಂದ್ರ ಸರ್ಕಾರ. ಉದ್ಘಾಟನೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. ಬೇಕಾದರೆ ಹೆದ್ದಾರಿಯಲ್ಲಿ ಓಡಾಡುವವರನ್ನೇ ಕೇಳಿ. ನಿರ್ಮಾಣ ಕಾರ್ಯದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಮಹಾದೇವಪ್ಪ ಅವರ ಪಾತ್ರವೇನೂ ಇಲ್ಲ ಎಂದು ಹರಿಹಾಯ್ದರು.
ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ನೆರವೇರಲಿದೆ. ಅಂದು ಮೈಸೂರು-ಕೊಡಗು ಜಿಲ್ಲೆಯ ಎಲ್ಲಾ ದೇಗುಲಗಳಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕಾಗಿ ಹುಯಿಲಾಳು ಬಳಿ 26 ಎಕರೆ ಜಾಗ ಗುರುತಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿ ಅನುಮೋದಿಸಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ:ಕೆಂಪೇಗೌಡ ಏರ್ಪೋರ್ಟ್ನಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ನೂತನ ಬಸ್ ನಿಲ್ದಾಣಗಳ ಉದ್ಘಾಟನೆ