ಮೈಸೂರು:ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ತಮ್ಮ ಜೀವನದುದ್ದಕ್ಕೂ ಸ್ವಂತಕ್ಕಾಗಿ ಎಂದೂ ಚಿಂತಿಸದೆ ಕಷ್ಟದ ಹಾದಿಯನ್ನೇ ತುಳಿದು ಬಂದರು ಎಂದು ತಮ್ಮ ಪತಿಯನ್ನು ನೆನೆದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕಣ್ಣೀರಿಟ್ಟು ಭಾವುಕರಾದರು.
ನಗರದ ಜಗನ್‌ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ಮೈಸೂರು ರಾಜವಂಶಸ್ಥರು ಸ್ಥಾಪಿಸಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿಷ್ಠಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಪತಿ ಯಾರಿಗೂ ಕೇಡು ಬಯಸಿರಲಿಲ್ಲ. ರಾಜವಂಶಕ್ಕೆ ನ್ಯಾಯಬದ್ಧವಾಗಿ ಸಿಗಬೇಕಿದ್ದ ಆಸ್ತಿಯನ್ನು ಉಳಿಸಿಕೊಳ್ಳಲು ಅವರು ನಡೆಸಿದ ಕಾನೂನು ಹೋರಾಟ ಅವರನ್ನು ಉಳಿಸಿತು. 40 ವರ್ಷಗಳ ಪತಿಯೊಂದಿಗಿನ ಒಡನಾಟ ನನ್ನನ್ನು ಗಟ್ಟಿಗೊಳಿಸಿತು. ಅವರು ಕಲಾರಾಧಕರಾಗಿದ್ದು, ಹೃದಯ ವೈಶಾಲ್ಯತೆ ಹೊಂದಿದ್ದರು. ಅವರು ಸೂಕ್ಷ್ಮ ಸ್ವಭಾವದ ವ್ಯಕ್ತಿ ಹಾಗೂ ಉತ್ತಮ ಪತಿಯಾಗಿದ್ದರು ಎಂದು ಸ್ಮರಿಸಿದರು.