ಮೈಸೂರು: "ಜೆಡಿಎಸ್‌ಗೆ ಯಾವುದೇ ತತ್ವ ಸಿದ್ದಾಂತಗಳಿಲ್ಲ. ಅವರಿಗೆ ಓಟ್ ಹಾಕಿದರೆ ಬಿಜೆಪಿಗೆ ಓಟ್ ಹಾಕಿದಂತೆ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಮೈಸೂರಿನ ಜೆ.ಕೆ.ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
"ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ. ಮೈಸೂರು, ಚಾಮರಾಜನಗರ ಜಿಲ್ಲೆಯ 15ಕ್ಕೆ 15 ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲಲಿದೆ" ಎಂದರು.
ಜೆಡಿಎಸ್ ಪಕ್ಷದ ಕುರಿತು ಮಾತನಾಡಿ, "ರಾಜ್ಯದಲ್ಲಿರುವುದು ಜನಪರ ಸರ್ಕಾರವಲ್ಲ. ಇದು ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದಿರುವ ಸರ್ಕಾರ. ಕಾಂಗ್ರೆಸ್‌ನ 14 ಶಾಸಕರನ್ನು ಸಿದ್ದರಾಮಯ್ಯನವರೇ ಬಿಜೆಪಿಗೆ ಕಳುಹಿಸಿದ್ದರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಹಾಗಾದರೆ ಜೆಡಿಎಸ್ ನ ಮೂವರು ಶಾಸಕರನ್ನು ಯಾರು ಬಿಜೆಪಿಗೆ ಕಳಿಸಿದರು, ನಿಮಗೆ ನಾಚಿಕೆಯಾಗುವುದಿಲ್ಲವೇ? ರಾಜ್ಯದಲ್ಲಿ ಬಿಜೆಪಿ ಈ ಮಟ್ಟಕ್ಕೆ ಬೆಳೆಯಲು ಜೆಡಿಎಸ್ ಕಾರಣ" ಎಂದು ವಾಗ್ದಾಳಿ ನಡೆಸಿದರು.
"ಜೆಡಿಎಸ್ ಎಂದಿಗೂ ಗೆದ್ದೆತ್ತಿನ ಬಾಲ ಹಿಡಿಯುತ್ತದೆ. ನಾವು ಇನ್ನೆಂದೂ ಜೆಡಿಎಸ್ ಅನ್ನು ಸೇರಿಸಿಕೊಳ್ಳುವುದಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಹೊಂದಾಣಿಕೆ ಬೇಡ ಎಂದಿದ್ದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಕೇಳಿರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 20 ರಿಂದ 22 ಸೀಟು ಗೆದ್ದರೆ ಹೆಚ್ಚು" ಎಂದರು. "ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ದ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಅಲಿಬಾಬಾ ಚಾಲೀಸ್ ಚೋರ್ ಇದ್ದಂತೆ. ಇಂತಹ ಭ್ರಷ್ಟ ಸರ್ಕಾರ ಮುಂದೆಯೂ ಬರಬೇಕಾ" ಎಂದು ಪ್ರಶ್ನಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, "ಇದು ಜನರ ಧ್ವನಿಯಾಗಿರುವ ಯಾತ್ರೆ. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಯಾತ್ರೆ ಮಾಡುತ್ತಿದ್ದೇವೆ. ಏನಾದರೂ ಮಾಡಿ ಈ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಜನರು ಸಹ ಸಂಕಲ್ಪ ಮಾಡಿದ್ದಾರೆ. ಜನರು ನಮಗೆ ಕೊಟ್ಟ ಸ್ವಾಗತ ಮೈಸೂರು ಚಾಮರಾಜನಗರ ಜಿಲ್ಲೆಯ 15 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಿಸುವುದಾಗಿ ಕೊಟ್ಟಿರುವ ಸ್ವಾಗತ" ಎಂದರು.