ಮೈಸೂರು:ವಿರೋಧ ಪಕ್ಷದ ನಾಯಕರು ಅಸಂಬದ್ಧವಾಗಿ ಮಾತನಾಡಿದ್ದಾರೆ ಆದರೆ ನಾನು ಅವರ ಬಗ್ಗೆ ಏನೂ ಮಾತನಾಡುವುದಿಲ್ಲ. ನನಗೆ ಹೊಗಳಿಕೆ ಅಂದ್ರೆ ಭಯ, ತೆಗಳಿಕೆಯನ್ನು ಮೆಟ್ಟಿಲು ಮಾಡಿಕೊಂಡು ಹೋಗೋದು ನನಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುತ್ತೂರಿನ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಭಜನಾ ಮೇಳದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲವನ್ನೂ ಒಂದೇ ರೀತಿ ತೆಗೆದುಕೊಂಡು ಹೋಗುವ ಸಮ ಪ್ರಜ್ಞೆ ನಮ್ಮದಾಗಬೇಕು. ಧರ್ಮದಾಕ್ಷಣೆ ಜೊತೆ ಜನ ಬೆರೆತರೆ ಸುಸಂಸ್ಕೃತ ಸಮಾಜ ನಿರ್ಮಾಣ ಆಗುತ್ತದೆ. ನಮ್ಮ ನಡವಳಿಕೆ ಹಾಗೂ ಆಚಾರ ವಿಚಾರ ನಮ್ಮ ಸಂಸ್ಕೃತಿಯಿಂದ ಬರುತ್ತದೆ.
ನಾಗರಿಕತೆ ಹಾಗೂ ಸಂಸ್ಕೃತಿ ಬಗ್ಗೆ ಬಹಳ ಜನರಿಗೆ ಗೊತ್ತಿಲ್ಲ. ನಮ್ಮ ಹತ್ತಿರ ಇರೋದು ನಾಗರಿಕತೆ. ನಾನು ಏನಾಗಿದ್ದೇನೆ ಎನ್ನುವುದು ಸಂಸ್ಕೃತಿ, ಮನುಷ್ಯ ಮಾತಿನಿಂದ ದೊಡ್ಡವನಾಗುತ್ತಾರೆ ಎಂದು ಹೇಳಿದರು. ವಿರೋಧ ಪಕ್ಷದ ನಾಯಕರ ಮಾತುಗಳು ದೊಡ್ಡವರ ಸಣ್ಣತನವನ್ನು ತೋರಿಸುತ್ತದೆ. ಸ್ಥಾನದಿಂದ ಗೌರವ ಬರುವುದು ಬೇರೆ ಆ ಸ್ಥಾನದ ಗೌರವವನ್ನು ನಾವು ಉಳಿಸಿಕೊಂಡು ಹೋಗಬೇಕು. ಮುಂದಿನ ಪೀಳಿಗೆಗೆ ಏನು ಉಳಿಸಿಕೊಂಡು ಹೋಗಬೇಕು ಎಂಬುದು ಗೊತ್ತಾಗಬೇಕು ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಾತನಾಡಿ, ನಮ್ಮ ದೇಶದಲ್ಲಿ ಕೆಲವರು ಎಡಬಿಡಂಗಿಗಳಿದ್ದಾರೆ. ಅವರಿಗೆ ನಾವು ಏನೇ ಮಾಡಿದರು ಅದು ತಪ್ಪು. ಕೇವಲ ತಪ್ಪು ಹುಡುಕುವುದೇ ಅವರ ಕೆಲಸ. ಕೋವಿಡ್ ಸಮಯದಲ್ಲಿ ಜನರು ಸರ್ಕಾರದ ಬಗ್ಗೆ ಬೇಸರ ಪಟ್ಟುಕೊಳ್ಳಲಿಲ್ಲ. ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಜನ ಕಷ್ಟಗಳನ್ನು ಅನುಭವಿಸಿದರು. ಆದರೆ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡಲಿಲ್ಲ ಎಂದು ಹೇಳಿದರು.