ಮೈಸೂರು: ವ್ಯಕ್ತಿಯೊಬ್ಬರ ಸಾವಿನ ಕುರಿತಂತೆ ಕುಟುಂಬಸ್ಥರೇ ಸಂಶಯ ವ್ಯಕ್ತಪಡಿಸಿದ ಮೇಲೆ ಅಂತ್ಯಕ್ರಿಯೆ ನಡೆಸಿದ ಬಳಿಕವೂ ಮರಳಿ ಶವವನ್ನ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿರುವ ಘಟನೆ ತಿ.ನರಸೀಪುರ ತಾಲೂಕಿನ ಯಡದೊರೆ ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮದ ವಿನೋದರಾಜು(34) ಎಂಬುವರು ಫೆಬ್ರವರಿ 21ರಂದು ಮೃತಪಟ್ಟಿದ್ದರು. ಗ್ರಾಮದ ಹೊರಭಾಗದ ಸ್ಮಶಾನದಲ್ಲಿ ಅಂತ್ಯಕ್ರಿಯೆಯನ್ನು ಮಾಡಲಾಗಿತ್ತು. ಆದರೆ, ವಿನೋದರಾಜು ಸಾವಿನ ಹಿಂದೆ ಅವರ ಹೆಂಡತಿಯ ಕೈವಾಡವಿದೆ ಎಂದು ಶಂಕಿಸಿ, ಮೃತನ ಸಹೋದರ ರಘು ಹಾಗೂ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ಗಾಯಾಳುಗಳು : ಆಸ್ಪತ್ರೆಗೆ ಕರೆದೊಯ್ದ ಶಾಸಕರು
ಅಣ್ಣನ ಸಾವಿನ ವೇಳೆ ನಮ್ಮ ಕುಟುಂಬಕ್ಕೆ ಅತ್ತಿಗೆ ಯಾವುದೇ ಮಾಹಿತಿ ನೀಡಿಲ್ಲ. ಅನಾರೋಗ್ಯದ ಯಾವ ವಿಚಾರದ ಬಗ್ಗೆಯೂ ನಮಗೆ ಮಾಹಿತಿ ನೀಡಿಲ್ಲ. ಪರಿಣಾಮ ನಮಗೆ ಅತ್ತಿಗೆ ಮೇಲೆ ಅನುಮಾನ ಮೂಡಿದೆ. ಅಣ್ಣನ ಸಾವಿಗೆ ನ್ಯಾಯ ದೊರಕಿಸಲು ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಸಹೋದರ ರಘು ಎಂಬುವರು ತಿಳಿಸಿದ್ದಾರೆ.
ವಿನೋದರಾಜು ಕುಟುಂಬಸ್ಥರು ನೀಡಿದ ದೂರಿನ ಹಿನ್ನೆಲೆಯಲ್ಲಿ ಶುಕ್ರವಾರ ತಹಶೀಲ್ದಾರ್ ಬಿ ಗಿರಿಜಾ ಹಾಗೂ ಪೊಲೀಸರ ಸಮ್ಮುಖದಲ್ಲಿ ಅಂತ್ಯಸಂಸ್ಕಾರವಾಗಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.