ಮೈಸೂರು: ಬಿಹಾರ ಮೂಲದ ಲಾರಿ ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದರು. ಆದರೆ, ಕುಟುಂಬಸ್ಥರಲ್ಲಿ ಶವ ತೆಗೆದುಕೊಂಡು ಹೋಗಲು ಹಣವಿರಲಿಲ್ಲ. ಹೀಗಾಗಿ, ಮಾನವೀಯತೆಯ ಆಧಾರದಲ್ಲಿ ಪೊಲೀಸರೇ ಶವಸಂಸ್ಕಾರ ನೆರವೇರಿಸಿದರು.
ಬಿಹಾರದ ಸರನ್ ಜಿಲ್ಲೆಯ ದೂದ್ನಾಥ್ ಮಾಂಜಿ (55) ಡಿಸೆಂಬರ್ 18ರಂದು ಬಿಹಾರದಿಂದ ಹೊರಟು ಆಂಧ್ರಪ್ರದೇಶದ ಅನಂತಪುರದಲ್ಲಿ ಲಾರಿ ಅನ್ಲೋಡ್ ಮಾಡಿ ಡಿಸೆಂಬರ್ 23ರಂದು ಮೈಸೂರಿನ ಭಾರತ್ ರೋಡ್ ವೇಸ್ ಕಂಪನಿಗೆ ಬಂದಿದ್ದರು. ಸರಕುಗಳನ್ನು ಲೋಡ್ ಮಾಡುತ್ತಿರುವ ಸಂದರ್ಭದಲ್ಲಿ ಚಾಲಕನಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಕಂಪೆನಿಯವರು ಆತನನ್ನು ಅಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೇ ಮಾಂಜಿ ಮೃತಪಟ್ಟಿದ್ದರು.
ಈ ಬಗ್ಗೆ ಕುಟುಂಬದವರಿಗೆ ಕಂಪೆನಿಯ ಮ್ಯಾನೇಜರ್ ಮಾಹಿತಿ ನೀಡಿದ್ದರು. ಆದರೆ, ಪ್ರತಿಸಲವೂ ಕರೆ ಮಾಡಿದಾಗಲು ಬರುವುದಾಗಿ ಹೇಳುತ್ತಿದ್ದ ಕುಟುಂಬದವರು ಬರಲೇ ಇಲ್ಲ. ಕಂಪೆನಿಯವರು ಕೊನೆಯದಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಘಟನೆಯ ಮಾಹಿತಿ ನೀಡಿದ್ದಾರೆ.