ಮೈಸೂರು:ಶಾಸಕ ತನ್ವೀರ್ ಸೇಠ್ಗೆ ಜೀವ ಬೆದರಿಕೆ ಇದೆ ಎಂದು ಮೈಸೂರಿನಲ್ಲಿ ಮೂರು ಕಡೆ ದೂರು ದಾಖಲಿಸಲಾಗಿದೆ. ಮೈಸೂರಿನ ಉದಯಗಿರಿ ಮತ್ತು ಮಂಡಿ ಪೊಲೀಸ್ ಠಾಣೆ ಹಾಗೂ ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಅವರಿಗೆ ಕಾಂಗ್ರೆಸ್ ಬ್ಲಾಕ್ ಸಮಿತಿಯಿಂದ ದೂರು ನೀಡಲಾಗಿದೆ.
ಹಾಸನದಲ್ಲಿ ನಡೆದ ಭಜರಂಗದಳ ಕಾರ್ಯಕ್ರಮದಲ್ಲಿ ರಘು ಸಕಲೇಶಪುರ ಅವರು ಶಾಸಕರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಟಿಪ್ಪು ಪ್ರತಿಮೆ ಸ್ಥಾಪಿಸುವ ಕನಸು ಬಿಡದಿದ್ದರೆ ಕೊಲೆ ಮಾಡುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಬ್ಲಾಕ್ ಸಮಿತಿ ಆರೋಪಿಸಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.