ಮೈಸೂರು: ನಾಡಹಬ್ಬ ದಸರಾದ ಜಂಬೂಸವಾರಿಯಂದು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸೂಕ್ತ ಭದ್ರತೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಜಂಬೂ ಸವಾರಿಗೆ ಕೈಗೊಳ್ಳಲಾಗ್ತಿರುವ ಭದ್ರತೆ ಕುರಿತಂತೆ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಮಾಹಿತಿ ನೀಡಿರುವುದು.. ಇಂದು ಅರಮನೆ ಮುಂಭಾಗದಲ್ಲಿ ನಡೆದ ಕೊನೆಯ ಹಂತದ ಜಂಬೂಸವಾರಿ ಮೆರವಣಿಗೆಯ ತಾಲೀಮಿನಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ನಿರ್ದೇಶನದಂತೆ ಭದ್ರತೆಗೆ ಎಲ್ಲ ರೀತಿಯ ಕ್ರಮ ತೆಗೆದುಕೊಂಡಿದ್ದೇವೆ.
ಜಂಬೂಸವಾರಿಯಂದು ಅರಮನೆಯ ಒಳಭಾಗದ ಇಂಚು ಇಂಚನ್ನು ಎಸಿ ತಪಾಸಣೆಗೆ ಒಳಪಡಿಸುತ್ತೇವೆ. ಅಂದು ಬೆಳಗ್ಗೆಯಿಂದ ಯಾರಿಗೂ ಪ್ರವೇಶ ಇರುವುದಿಲ್ಲ. ಬಂದು ಹೋಗುವ ಎಲ್ಲರನ್ನೂ ಸ್ಕ್ಯಾನ್ ಮಾಡಲು, ಸ್ಕ್ಯಾನರ್ ಇಟ್ಟಿರುತ್ತೇವೆ. ಇಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಗುರುತಿನ ಚೀಟಿ ನೀಡಿರುತ್ತೇವೆ ಎಂದರು.
10 ಗಂಟೆ ನಂತರ ನಿರ್ಬಂಧ
ಅನಾವಶ್ಯಕವಾಗಿ ಜನ ಸೇರಬಾರದೆಂಬ ಕಾರಣಕ್ಕಾಗಿ ಜಂಬೂಸವಾರಿಯ ದಿನ ಅರಮನೆ ಸುತ್ತಮುತ್ತಲಿನ ರಸ್ತೆಯಲ್ಲಿ 10 ಗಂಟೆ ನಂತರ ನಿರ್ಬಂಧ ಹೇರಲಾಗುವುದು ಎಂದು ತಿಳಿಸಿದ್ರು. ಎಲ್ಲ ಸಿಬ್ಬಂದಿಗೆ ಲಸಿಕೆ ಹಾಕಿಸಲಾಗಿದೆ ಎಂದರು.
ಜಂಬೂಸವಾರಿಗೆಂದು ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಈ ವರ್ಷ ಜನರು ಮನೆಯಲ್ಲಿ ಜಂಬೂಸವಾರಿ ನೋಡಿ ಆನಂದಿಸುವಂತೆ ಕಮಿಷನರ್ ಅವರು ಮನವಿ ಮಾಡಿದರು. ಕಳೆದ ಬಾರಿಗಿಂತ ಈ ಬಾರಿ ಕಲಾತಂಡಗಳು, ಸ್ತಬ್ಧಚಿತ್ರಗಳನ್ನು ಹೆಚ್ಚು ಮಾಡಿದ್ದೇವೆ ಎಂದು ಡಾ.ಚಂದ್ರಗುಪ್ತ ತಿಳಿಸಿದರು.
ಇಂದು ಜಂಬೂ ಸವಾರಿಯ ಅಂತಿಮ ತಾಲೀಮು
ಜಂಬೂಸವಾರಿಯ ಅಂತಿಮ ತಾಲೀಮನ್ನು ಇಂದು ನಡೆಸಿದ್ದು, ಅಕ್ಟೋಬರ್ 15ರಂದು 5 ರಿಂದ 5.30ರೊಳಗೆ ಜಂಬೂಸವಾರಿಗೆ ಪುಷ್ಪಾರ್ಚನೆಗೆ ಸಮಯ ನಿಗದಿಯಾಗಿದೆ. 4.36 ರಿಂದ 4.46 ರೊಳಗೆ ನಂದಿಧ್ವಜ ಪೂಜೆ ನಡೆಯಲಿದೆ. ಆ ಸಮಯಕ್ಕೆ ಅನುಗುಣವಾಗಿ ನಮ್ಮೆಲ್ಲಾ ಕಲಾತಂಡಗಳು, ಅಶ್ವಪಡೆ, ಗಜಪಡೆಯ ತಾಲೀಮು ನಡೆಸಲಾಗಿದೆ.
ಆ ದಿನ ಮೆರವಣಿಗೆಯಲ್ಲಿ 8 ಕಲಾತಂಡಗಳು, 6 ಸ್ತಬ್ಧಚಿತ್ರಗಳು, ಪೊಲೀಸ್ ದಳ, ಅಶ್ವಪಡೆ ಇರುತ್ತದೆ. ಜಂಬೂಸವಾರಿ ನಡೆಸಲು ಎಲ್ಲಾ ರೀತಿಯ ಏರ್ಪಾಡುಗಳನ್ನು ಮಾಡಿಕೊಂಡಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದರು.