ಮೈಸೂರು:ಮೈಸೂರಿನ ಕೇಂದ್ರ ಕಾರಾಗೃಹದ ಮೇಲೆ ನಗರ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ಕೈದಿಗಳಿಂದ ಮೊಬೈಲ್, ಹಣ, ಗಾಂಜಾ, ಚಾಕು ಕತ್ತರಿ ಮತ್ತು ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಚರಣೆಯ ನೇತೃತ್ವ ವಹಿಸಿದ್ದ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿರವರು ತಂಡ ರಚಿಸಿ ಎಲ್ಲಾ ವಿಭಾಗದ ಎಸಿಪಿ, ಇನ್ಸ್‌ಪೆಕ್ಟರ್‌ಗಳು, ಎಸ್‌ಐಗಳು, ಕಮಾಂಡೋ ಪಡೆ, ಮಾದಕ ವಸ್ತು ಪತ್ತೆ ಹಚ್ಚುವ ಶ್ವಾನ ದಳದೊಂದಿಗೆ ಮೈಸೂರಿನ ಕೇಂದ್ರ ಕಾರಾಗೃಹದ ಮೇಲೆ ಏಕಾಏಕಿ ದಾಳಿ ನಡೆಸಿದರು.
ದಾಳಿ ನಡೆಸಿದ ಪೊಲೀಸರಿಗೆ ಅಚ್ಚರಿಯೇ ಕಾದಿತ್ತು. ತಮ್ಮ ಅಪರಾಧದಿಂದ ಕಾನೂನಿ ಚೌಕಟ್ಟಿನ ಒಳಗೆ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಲ್ಲಿ ನಿಯಮ ಮೀರಿ ಅವರ ಬಳಿ 15 ಸಾವಿರ ಹಣ, 5 ಮೊಬೈಲ್ ಫೋನ್‌ಗಳು, 20 ಗ್ರಾಂ ಗಾಂಜಾ, ಚಾಕು ಕತ್ತರಿ ಹಾಗೂ ಸ್ಪೂನ್‌ಗಳಿಂದ ಮಾಡಿದ ಆಯುಧಗಳು ದೊರಕಿದ್ದು ಎಲ್ಲವನ್ನು ಪೊಲೀಸರು ವಶಪಡಿಸಿಕೊಂಡರು. ಅಲ್ಲದೆ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಯ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ. ದಿವ್ಯಶ್ರೀ ಹಾಗೂ ಇತರೆ ಅಧಿಕಾರಿಗಳು ಇದ್ದರು.
ಈ ಕುರಿತು ಮಾಧ್ಯಮಗಳೊಂದಿಗೆ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಪ್ರತಿಕ್ರಿಯಿಸಿ , ಮೈಸೂರು ಕೇಂದ್ರ ಕಾರಾಗೃಹದ ಹಿಂಭಾಗದಲ್ಲಿರುವ ಸ್ಮಶಾನದ ಕಡೆಯಿಂದ ಕಾರಾಗೃಹದ ಆವರಣದೊಳಕ್ಕೆ ಗಾಂಜಾ ಸೇರಿದಂತೆ ಇನ್ನಿತರ ವಸ್ತುಗಳನ್ನು ಎಸೆಯಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಕಾರಾಗೃಹದ ಸಿಬ್ಬಂದಿ ಏನಾದರೂ ಶಾಮೀಲಾಗಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.