ಮೈಸೂರು: ಹುಲಿಯನ್ನು ಕೊಂದು ಅದರ ಉಗುರಿಗಾಗಿ ನಾಲ್ಕು ಕಾಲುಗಳನ್ನು ಕತ್ತರಿಸಿಕೊಂಡು ಹೋಗಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದು , ಆರೋಪಿಯಿಂದ 7 ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಿನ್ನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಲ್ಲಹಳ್ಳ ವಲಯದ ಕಾರ್ಮಾಡು ಗೇಟ್ ಹಾಗೂ ತಟ್ಟೆಕೆರೆ ಹಾಡಿ ಮಧ್ಯದ ಅರಣ್ಯ ಪ್ರದೇಶದಲ್ಲಿ ಸುಮಾರು 6 ವರ್ಷದ ಹುಲಿಯ ಕಳೇಬರ ಪತ್ತೆಯಾಗಿದ್ದು, ಉಗುರಿಗಾಗಿ ಹುಲಿಗೆ ಗುಂಡು ಹಾರಿಸಿ ಕೊಂದು 4 ಕಾಲುಗಳನ್ನು ಕತ್ತರಿಸಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಪೊಲೀಸರು ತನಿಖೆ ಕೈಗೊಂಡಿದ್ದು, ಪ್ರಮುಖ ಆರೋಪಿಯಾದ ಸಂತೋಷ್ನನ್ನು ಬಂಧಿಸಿ, ಆತನಿಂದ ಹುಲಿಯ 7 ಉಗುರುಗಳನ್ನು ವಶಪಡಿಕೊಂಡಿದ್ದಾರೆ.
ಆರೋಪಿಯ ಜಾಡು ಪತ್ತೆ ಮಾಡಿದ ‘ರಾಣಾ’
ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸ್ ಶ್ವಾನ ರಾಣಾ ತೊಡಗಿತ್ತು. ಹುಲಿ ಶವ ಪತ್ತೆಯಾದ ಸ್ಥಳದಿಂದ ಆರೋಪಿಗಳ ಜಾಡು ಹಿಡಿದು ನೇರವಾಗಿ ಸಂತೋಷ್ ಮನೆ ಬಳಿ ಹೋಗಿ ನಿಂತಿದೆ. ತಕ್ಷಣ ಪೊಲೀಸರು ಆರೋಪಿಯನ್ನು ಸೆರೆ ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಆತನ ಮನೆಯಲ್ಲಿ ಜಿಂಕೆ ಮಾಂಸ, 4 ಜಿಂಕೆ ಕಾಲುಗಳು, ಬಂದೂಕಿನ 2 ಗುಂಡು ಪತ್ತೆಯಾಗಿವೆ. ಉಳಿದ ಆರೋಪಿಗಳಾದ ಕಾಂಡೇರ ಶರಣು, ಕಾಂಡೇರ ಶಶಿ, ಹೊಟ್ಟೆಗುಂಡ, ರಂಜು ತಲೆಮರಿಸಿಕೊಂಡಿದ್ದು, ಇವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಶಾಕಿಂಗ್: ಹುಲಿ ಕೊಂದು ನಾಲ್ಕು ಕಾಲು ಕತ್ತರಿಸಿಕೊಂಡು ಹೋದ ಕಿರಾತಕರು!
ಇನ್ನು ಹುಲಿಯ ಉಗುರುಗಳನ್ನು ಕಾಂಡೇರ ಶರಣು ಎಂಬಾತನ ಕಾಫಿ ಎಸ್ಟೇಟ್ನಲ್ಲಿ ಹೂತು ಹಾಕಿದ್ದ. ಹುಲಿಯ 7 ಉಗುರುಗಳು ಸಿಕ್ಕಿದ್ದು, ಉಳಿದ ಉಗುರುಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸದ್ಯಕ್ಕೆ ಬಂಧಿತ ಸಂತೋಷ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಎಸಿಎಫ್ ಆಂಟೋಣಿ ತಿಳಿಸಿದ್ದಾರೆ.