ಮೈಸೂರಿನಲ್ಲಿ ಮೋದಿ ಭರ್ಜರಿ ರೋಡ್ ಶೋ: ಪ್ರಧಾನಿಯತ್ತ ಮೊಬೈಲ್ ತೂರಿದ ಮಹಿಳೆ ಮೈಸೂರು : ಪಾರಂಪರಿಕ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಭರ್ಜರಿ ರೋಡ್ ಶೋ ನಡೆಸಿದರು. ಪ್ರಧಾನಿಯನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ಸೇರಿತ್ತು. ಮಾರ್ಗದುದ್ದಕ್ಕೂ ಅಭಿಮಾನಿಗಳು ಹೂವಿನ ಸುರಿಮಳೆಗೈದರು.
ವಿಶೇಷವಾಗಿ ವಿನ್ಯಾಸಗೊಳಿಸಲಾದ ವಾಹನದಲ್ಲಿ ಮೋದಿ ರೋಡ್ ಶೋ ನಡೆಸಿದರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ಶಾಸಕ ರಾಮದಾಸ್ ಕೂಡ ಜೊತೆಗಿದ್ದರು. ಮೆರವಣಿಗೆಯುದ್ದಕ್ಕೂ ಬಿಜೆಪಿ ಧ್ವಜಗಳು ರಾರಾಜಿಸುತ್ತಿದ್ದವು. ಮೋದಿಗೆ ವಾದ್ಯ ಮೇಳಗಳಿಂದ ಸ್ವಾಗತ ಕೋರಲಾಯಿತು.
ಮೈಸೂರಿನ ವಿದ್ಯಾಪೀಠದ ಸರ್ಕಲ್ನಿಂದ ಆರಂಭವಾದ ರೋಡ್ ಶೋ ವಿದ್ಯಾಪೀಠ, ಕಾಡಾ ಕಛೇರಿ, ಮಹಾನಗರ ಪಾಲಿಕೆ, ಕೆ.ಆರ್.ಸರ್ಕಲ್, ಸಯ್ಯಾಜಿ ರಾವ್ ವೃತ್ತದ ಮೂಲಕ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಸಾಗಿತು. ಕಾರ್ಯಕರ್ತರು ಮೋದಿಗೆ ಜೈಕಾರ ಹಾಕಿದರು.
ಮೋದಿಗಾಗಿ ವಿಶೇಷ ವಸ್ತುಗಳು: ಮೈಸೂರಿನ ಸಾಂಪ್ರದಾಯಿಕ ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ, ಮೈಸೂರು ಪಾಕ್, ಮೈಸೂರು ಪೇಟ, ಶ್ರೀಗಂಧ, ರೇಷ್ಮೆ ಸೇರಿದಂತೆ ಮೈಸೂರಿನ ವಿಶಿಷ್ಟ 18 ಬಗೆಯ ವಸ್ತುಗಳನ್ನು ಹಾಗೂ ತಿಂಡಿಯನ್ನು ಪ್ರಧಾನಿಗೆ ನೀಡಲಾಯಿತು. ನಾಡ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಸಾದವನ್ನು ರೋಡ್ ಶೋಗೂ ಮುನ್ನ ಪ್ರಧಾನಿಗೆ ನೀಡಲಾಯಿತು.
ಇದಕ್ಕೂ ಮುನ್ನ, ಪ್ರಧಾನಿ ಮೋದಿ ಒವೆಲ್ ಗ್ರೌಂಡ್‌ನಲ್ಲಿ ನಿರ್ಮಿಸಲಾಗಿದ್ದ ವಿಶೇಷ ಹೆಲಿಪ್ಯಾಡ್‌ನಲ್ಲಿ ಬಂದಿಳಿದರು. ಬಳಿಕ ಗನ್ ಹೌಸ್‌ನ ಬಸವೇಶ್ವರ ಪುತ್ಥಳಿ ಬಳಿಯಿಂದ ರೋಡ್ ಶೋ ಆರಂಭಿಸಿದರು. ಈ ಸಂದರ್ಭದಲ್ಲಿ ಭದ್ರತೆಗೆ ಆಗಮಿಸಿದ ವಾಹನದ ಮೇಲೆ ಮರದ ಕೊಂಬೆಯೊಂದು ಬಿದ್ದ ಪ್ರಸಂಗ ನಡೆಯಿತು. ತಕ್ಷಣ ಭದ್ರತಾ ಸಿಬ್ಬಂದಿ ಕೊಂಬೆ ತೆರವುಗೊಳಿಸಿದರು.
ಮೋದಿ ಕಡೆ ಮೊಬೈಲ್ ತೂರಿದ ಮಹಿಳೆ :ಮೋದಿಯವರು ರೋಡ್ ನಡೆಸುವ ವೇಳೆ ಪ್ರಧಾನಿ ಮೋದಿಯವರ ಕಡೆಗೆ ಮೊಬೈಲ್ ಎಸೆದಿರುವ ಘಟನೆ ನಡೆದಿದೆ. ಮಹಿಳೆ ಎಸೆದ ಫೋನ್ ಪ್ರಚಾರ ನಡೆಸುತ್ತಿದ್ದ ವಾಹನದ ಬಾನೆಟ್ ಮೇಲೆ ಬಿದ್ದಿದ್ದು, ಈ ವೇಳೆ ವಾಹನದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ಬಂದಿದೆ. ಅವರು ತಕ್ಷಣ ತಮ್ಮ ಭದ್ರತಾ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಎಡಿಜಿಪಿ ಅಲೋಕ್ ಕುಮಾರ್, ಬಿಜೆಪಿ ಮಹಿಳಾ ಕಾರ್ಯಕರ್ತೆಯೊಬ್ಬರು ಉತ್ಸಾಹದಲ್ಲಿರುವಾಗ ಮೊಬೈಲ್ ಎಸೆದಿದ್ದಾರೆ. ಇವರಿಗೆ ಯಾವುದೇ ದುರುದ್ದೇಶ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಎಸ್ಪಿಜಿ ಭದ್ರತೆಯಲ್ಲಿದ್ದರು. ಎಸ್ಪಿಜಿ ಸಿಬ್ಬಂದಿಗಳು ಮೊಬೈಲನ್ನು ಮಹಿಳೆಗೆ ಹಿಂತಿರುಗಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಮಹಿಳೆಯನ್ನು ಹುಡುಕುತ್ತಿರುವುದಾಗಿ ಹೇಳಿದರು.
ಇದನ್ನೂ ಓದಿ :ಕಾಂಗ್ರೆಸ್ನಿಂದ ನನಗೆ ಧಮ್ಕಿ.. ಶಿವನ ಕೊರಳಿಗೆ ನಾಗಸರ್ಪವೇ ಶೋಭೆ.. ಜನತೆಯೇ ಈಶ್ವರ ಸ್ವರೂಪಿ: ಮೋದಿ