ಮೈಸೂರು:ಹುಲಿ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ್ದಾರೆ. ಮೈಸೂರು ನಗರದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿಗೆ ಕೇಂದ್ರ ಅರಣ್ಯ ಸಚಿವರಾದ ಭೂಪೇಂದ್ರ ಯಾದವ್, ಕೇಂದ್ರದ ಪರಿಸರ ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವರಾದ ಅಶ್ವಿನಿ ಕುಮಾರ್ ಚೌದರಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಪೊಲೀಸ್ ಆಯುಕ್ತರಾದ ರಮೇಶ್ ಹಾಗೂ ಜನಪ್ರತಿನಿಧಿಗಳು ಇತರರು ಸ್ವಾಗತ ಕೋರಿದರು.
ಬಳಿಕ ಪ್ರಧಾನಿ ನಂಜನಗೂಡು ರಸ್ತೆ ಮಾರ್ಗದಲ್ಲಿ ರ‍್ಯಾಡಿಶನ್ ಬ್ಯೂ ಹೋಟೆಲ್ ತಲುಪಿ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿದೆ. ಪ್ರಧಾನಿ ವಾಸ್ತವ್ಯ ಹೂಡಿರುವ ಹೋಟೆಲ್ ಸೇರಿದಂತೆ ಸಂಚರಿಸುವ ಮಾರ್ಗ ಮತ್ತು ಭಾಗವಹಿಸುವ ಕಾರ್ಯಕ್ರಮದ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸ್ ಸರ್ಪಗಾವಲು ಇರಿಸಲಾಗಿದೆ. ಅರೆಸೇನಾ ಪಡೆಯೊಂದಿಗೆ ನಗರ ಸಶಸ್ತ್ರ ಮೀಸಲು ಪಡೆ, ಕಮಾಂಡೋ ಪಡೆಯೊಂದಿಗೆ ಸಿವಿಲ್ ಮತ್ತು ಸಂಚಾರ ಪೊಲೀಸರು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಆರಕ್ಷಕರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಭಾನುವಾರ ಬೆಳಗ್ಗೆ 6.20ಕ್ಕೆ ಹೋಟಲ್‌ನಿಂದ ನಂಜನಗೂಡು ಮಾರ್ಗವಾಗಿ ಮಂಡಕಳ್ಳಿ ಏರ್‌ಪೋರ್ಟ್ ತಲುಪಲಿರುವ ಪ್ರಧಾನಿ, ಅಲ್ಲಿಂದ ಬೆಳಗ್ಗೆ 7ಕ್ಕೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ತಾತ್ಕಲಿಕ ಹೆಲಿಪ್ಯಾಡ್ ತಲುಪಲಿದ್ದಾರೆ. ನಂತರ ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ನಡೆಸುವುದರೊಂದಿಗೆ ತಮಿಳುನಾಡಿನ ಮಧುಮಲೈ ಹುಲಿ ಮೀಸಲು ಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.