ಮೈಸೂರು : ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ರಸ್ತೆ ಲೋಕಾರ್ಪಣೆ, ಧಾರವಾಡದಲ್ಲಿ ರಾಜ್ಯದ ಮೊದಲ ಐಐಟಿ ಕ್ಯಾಂಪಸ್ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಬಂದಿಳಿದಿದ್ದಾರೆ. ಮೈಸೂರು ಏರ್ಪೋರ್ಟ್ಗೆ ವಾಯುಪಡೆಯ ವಿಶೇಷ ವಿಮಾನದಲ್ಲಿ ಆಗಮಿಸಿರುವ ಪ್ರಧಾನಿ ಮೋದಿ ಹೆಲಿಕಾಪ್ಟರ್ನಲ್ಲಿ ಮಂಡ್ಯದತ್ತ ಹೊರಟಿದ್ದಾರೆ.
ಮೈಸೂರು ಏರ್ಪೋರ್ಟ್ನಿಂದ ಹೆಲಿಕಾಪ್ಟರ್ನಲ್ಲಿ ಮಂಡ್ಯದ ಪಿಇಎಸ್ ಕಾಲೇಜು ಮೈದಾನಕ್ಕೆ ತೆರಳುತ್ತಿದ್ದಾರೆ. ಬಳಿಕ ಮಂಡ್ಯ ಪಿಇಎಸ್ ಕಾಲೇಜು ಬಳಿಯಿಂದ ಐಬಿ ವೃತ್ತದವರೆಗೂ 2 ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ಅಮರಾವತಿ ಹೋಟೆಲ್ ಬಳಿ ಬರಲಿರುವ ಪ್ರಧಾನಿ, ಹೋಟೆಲ್ ಮುಂಭಾಗದಿಂದ ಗೆಜ್ಜಲಗೆರೆವರೆಗೆ ಹೆದ್ದಾರಿ ವೀಕ್ಷಣೆ ಮಾಡಲಿದ್ದಾರೆ. ನಂತರ ಗೆಜ್ಜಲಗೆರೆ ಕಾಲೋನಿಯಲ್ಲಿ ನಿರ್ಮಾಣ ಆಗಿರುವ ಬೃಹತ್ ಸಮಾವೇಶದಲ್ಲಿ ಮೋದಿ ಭಾಗವಹಿಸಲಿದ್ದಾರೆ. ರೋಡ್ ಶೋ ವೇಳೆ ಸುಮಾರು 40 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಬಳಿಕ ಬೃಹತ್ ಸಮಾವೇಶದಲ್ಲಿ 2 ಲಕ್ಷ ಜನರು ಭಾಗವಹಿಸುವ ಸಾಧ್ಯತೆ ಇದೆ.
ಕಾರ್ಯಕ್ರಮದಲ್ಲಿ ಮೋದಿ ಅವರು ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಆರು-ಪಥವನ್ನು ಒಳಗೊಂಡಿರುವ ರಾಷ್ಟ್ರೀಯ ಹೆದ್ದಾರಿಯು 118 ಕಿಮೀ ಉದ್ದವಿದ್ದು, ಒಟ್ಟು 8,480 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಹೆದ್ದಾರಿಯಲ್ಲಿ ಬೆಂಗಳೂರು ಮತ್ತು ಮೈಸೂರಿನ ನಡುವಿನ ಸುಮಾರು ಮೂರು ಗಂಟೆಗಳ ಪ್ರಯಾಣವನ್ನು ಕೇವಲ 75 ನಿಮಿಷದಲ್ಲೇ ತಲುಪಬಹುದಾಗಿದೆ.
ಇದೇ ವೇಳೆ ಪ್ರಧಾನಿಯವರು ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಗೂ ಶಂಕುಸ್ಥಾಪನೆ ನೆರವೇರಿಸುವರು. ಸುಮಾರು 4,130 ಕೋಟಿ ರೂಪಾಯಿ ವೆಚ್ಚದಲ್ಲಿ 92 ಕಿಮೀ ಉದ್ದದ ರಸ್ತೆ ಯೋಜನೆ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಯೋಜನೆಯಿಂದ ಬೆಂಗಳೂರು ಹಾಗೂ ಕುಶಾಲನಗರದ ನಡುವಿನ ಸಂಪರ್ಕವು ಹೆಚ್ಚಲಿದೆ. ಅಲ್ಲದೆ, ಸುಮಾರು 5 ಗಂಟೆಯ ಪ್ರಯಾಣದ ಸಮಯವು ಕೇವಲ ಎರಡೂವರೆ ಗಂಟೆಗೆ ಇಳಿಕೆ ಆಗಲಿದೆ.
ಮಂಡ್ಯದ ಕಾರ್ಯಕ್ರಮದ ಬಳಿಕ ಮೋದಿ ಮಧ್ಯಾಹ್ನ 1.15ಕ್ಕೆ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳಲಿದ್ದಾರೆ. 1.40ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ವಾಯುಪಡೆಯ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಪ್ರಯಾಣಿಸುವರು. ಪ್ರಧಾನಮಂತ್ರಿ ಮೋದಿಯವರು ಮಧ್ಯಾಹ್ನ 2.20ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ಮಧ್ಯಾಹ್ನ 2.45ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿ ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದಾರೆ.
ಧಾರವಾಡದಲ್ಲಿ ಪ್ರಧಾನಿ ಐಐಟಿಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 2019ರ ಫೆಬ್ರುವರಿ ತಿಂಗಳಲ್ಲಿ ಪ್ರಧಾನಿ ಮೋದಿಯವರು ಈ ಐಐಟಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. 850 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದಾದ ಬಳಿಕ ಪ್ರಧಾನಿ ಮೋದಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಉದ್ಘಾಟಿಸಲಿದ್ದಾರೆ. ಇತ್ತೀಚೆಗೆ ಈ ಉದ್ದವಾದ ಪ್ಲಾಟ್‌ಫಾರ್ಮ್ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ಗೆ ಸೇರ್ಪಡೆಯಾಗಿದೆ. ಸುಮಾರು 20 ಕೋಟಿ ವೆಚ್ಚದಲ್ಲಿ 1,507 ಮೀಟರ್ ಉದ್ದದ ಪ್ಲಾಟ್‌ಫಾರ್ಮ್ ನಿರ್ಮಾಣ ಮಾಡಲಾಗಿದೆ.
ಇದರ ಜೊತೆಗೆ ಮೋದಿಯವರು ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ವಿಭಾಗದ ರೈಲ್ವೆ ವಿದ್ಯುದ್ದೀಕರಣ ಮತ್ತು ಮೇಲ್ದರ್ಜೆಗೇರಿದ ಹೊಸಪೇಟೆ ನಿಲ್ದಾಣವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಹೊಸಪೇಟೆ ನಿಲ್ದಾಣವನ್ನು ಪುನರಾಭಿವೃದ್ಧಿ ಮಾಡಲಾಗಿದ್ದು, ಪ್ರಯಾಣಿಕರಿಗೆ ಅನುಕೂಲಕರ ಮತ್ತು ಆಧುನಿಕ ಸೌಲಭ್ಯ ಒದಗಿಸಲಾಗಿದೆ. ಅಲ್ಲದೆ, ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿಯ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕೂಡ ಇದೇ ವೇಳೆ ನೆರವೇರಲಿದೆ.
ತದನಂತರ ಜಯದೇವ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಶಂಕುಸ್ಥಾಪನೆಯನ್ನು ಮೋದಿ ನೆರವೇರಿಸಲಿದ್ದಾರೆ. ಸುಮಾರು 250 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ 1,040 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ಧಾರವಾಡ ಬಹುಗ್ರಾಮ ನೀರು ಸರಬರಾಜು ಯೋಜನೆಗೆ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವರು ಸುಮಾರು 150 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ತುಪ್ಪರಿಹಳ್ಳ ಪ್ರವಾಹ ಹಾನಿ ನಿಯಂತ್ರಣ ಯೋಜನೆಗೆ ಶಂಕುಸ್ಥಾಪನೆ ಮಾಡುವರು.
ಇದನ್ನೂ ಓದಿ:ಹೈದರಾಬಾದ್‌ನಲ್ಲಿ 54ನೇ ಸಿಐಎಸ್‌ಎಫ್ ಪರೇಡ್: ಗೃಹ ಸಚಿವ ಅಮಿತ್ ಶಾ ಭಾಗಿ