ಮೈಸೂರು: ಚಾಮುಂಡಿ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು, ಅರಣ್ಯ ಇಲಾಖೆ ಪ್ಲಾಸ್ಟಿಕ್ ಮುಕ್ತ ಚಾಮುಂಡಿ ಬೆಟ್ಟ ಅಭಿಯಾನಕ್ಕೆ ನಿನ್ನೆ ಚಾಲನೆ ನೀಡಿದೆ. ಈ ಅಭಿಯಾನ ಮಾರ್ಚ್ 21ರ ವರೆಗೆ ನಡೆಯಲಿದೆ. ಆಸಕ್ತ ಸಾರ್ವಜನಿಕರು, ಪರಿಸರ ಪ್ರೇಮಿಗಳು, ಸಂಘ ಸಂಸ್ಥೆಗಳು ಈ ಅಭಿಯಾನದಲ್ಲಿ ಭಾಗವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ನಾಡ ಅಧಿದೇವತೆಯ ವಾಸ ಸ್ಥಳ ಚಾಮುಂಡಿ ಬೆಟ್ಟಕ್ಕೆ ಪ್ರತಿದಿನ ದೇಶ ವಿದೇಶಗಳಿಂದ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ. ಇದಲ್ಲದೆ ಪ್ರತಿದಿನ ಸ್ಥಳೀಯರು ಸಹ ಚಾಮುಂಡಿ ಬೆಟ್ಟಕ್ಕೆ ಬಂದು, ದೇವಿಯ ದರ್ಶನ ಪಡೆದು ನಂತರ ಚಾಮುಂಡಿ ಬೆಟ್ಟದಲ್ಲಿ ಕುಳಿತು ತಿಂಡಿ ಹಾಗೂ ಪದಾರ್ಥಗಳನ್ನು ತಿಂದು ಅಲ್ಲೇ ಪ್ಲಾಸ್ಟಿಕ್ ಸೇರಿದಂತೆ ಇತರ ಪದಾರ್ಥಗಳನ್ನು ಎಸೆದು ಹೋಗುವುದು ಹೆಚ್ಚಾಗಿದೆ.
ಇದರ ಜೊತೆಗೆ ಗುಂಪು ಗುಂಪಾಗಿ ಯುವಕರು ಬಂದು ಚಾಮುಂಡಿ ಬೆಟ್ಟದ ಪರಿಸರದಲ್ಲಿ ಕುಳಿತು ಪಾರ್ಟಿ ಮಾಡಿ, ಖಾಲಿ ಮದ್ಯದ ಬಾಟಲ್ಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಇದರಿಂದ ಚಾಮುಂಡಿ ಬೆಟ್ಟದ ಪರಿಸರ ಹಾಳಾಗುತ್ತಿದೆ. ಇದರ ಜೊತೆಗೆ ಬೆಟ್ಟಕ್ಕೆ ಬರುವ ಪ್ರವಾಸಿಗರು ಹಾಗೂ ಭಕ್ತರಿಗೂ ಕಿರಿಕಿರಿ ಆಗುತ್ತಿದೆ. ಇದನ್ನು ತಪ್ಪಿಸಲು ಅರಣ್ಯ ಇಲಾಖೆ ನಿನ್ನೆ ವಿಶ್ವ ವನ್ಯಜೀವಿ ದಿನದಿಂದ, ಮಾರ್ಚ್ 21ರ ವಿಶ್ವ ಅರಣ್ಯ ದಿನದವರೆಗೆ, ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಛಗೊಳಿಸುವ ಅಭಿಯಾನ ಆರಂಭಿಸಿದೆ. ಆಸಕ್ತ ಸಂಘ ಸಂಸ್ಥೆಗಳು, ಸಾರ್ವಜನಿಕರು, ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳು ಸೇರಿದಂತೆ, ಇತರ ಆಸಕ್ತರು ಚಾಮುಂಡಿ ಬೆಟ್ಟವನ್ನು ತ್ಯಾಜ್ಯ ಮುಕ್ತಗೊಳಿಸುವ ಅಭಿಯಾನದಲ್ಲಿ ಭಾಗವಹಿಸುವಂತೆ ಅರಣ್ಯ ಇಲಾಖೆ ಕೇಳಿಕೊಂಡಿದೆ.