ಮೈಸೂರು: ಕರ್ನಾಟಕ ಮೃಗಾಲಯ ಪ್ರಾಧಿಕಾರದಿಂದ ಸಿಎಸ್‌ಆರ್ ಅನುದಾನದಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸ ಮೃಗಾಲಯ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಬೆಳಗಾವಿ ಮೃಗಾಲಯವನ್ನು ಉತ್ತಮವಾಗಿ ಅಭಿವೃದ್ಧಿಪಡಿಸಲಾಗಿದೆ. ಅಲ್ಲಿಯೇ ರಕ್ಷಣಾ ಕೇಂದ್ರವನ್ನು ಸ್ಥಾಪಿಸುವ ಯೋಜನೆ ಇದೆ ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದರು.
ವನ್ಯಪ್ರಾಣಿ ಸಂರಕ್ಷಣೆ ಬಗ್ಗೆ ಜಾಗೃತಿ: ಚಾಮರಾಜೇಂದ್ರ ಮೃಗಾಲಯವು ಕೇಂದ್ರ ಮೃಗಾಲಯ ಪ್ರಾಧಿಕಾರ(ಸಿಝಡ್ಎ)ದ ಸಹಯೋಗದಲ್ಲಿ ನಗರದ ಖಾಸಗಿ ಹೋಟೆಲ್ನಲ್ಲಿ ಬುಧವಾರ ಆಯೋಜಿಸಿದ್ದ ಮೃಗಾಲಯಗಳ ನಿರ್ದೇಶಕರ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮತ್ತು ಕೇಂದ್ರ ಮೃಗಾಲಯ ಪ್ರಾಧಿಕಾರ ಅಗತ್ಯ ಸಂಪನ್ಮೂಲ ಒದಗಿಸಿದರೆ ರಾಜ್ಯದಲ್ಲಿ ಹೊಸ ಮೃಗಾಲಯಗಳನ್ನು ಆರಂಭಿಸಲು ಅನುಕೂಲವಾಗಲಿದೆ. ಮಕ್ಕಳನ್ನು ಟಿವಿ, ಮೊಬೈಲ್ ಫೋನ್‌ನಿಂದ ದೂರವಾಗಿಸಿ ಮೃಗಾಲಯಗಳತ್ತ ಗಮನ ಸೆಳೆಯುವ ನಿಟ್ಟಿನಲ್ಲಿ ವನ್ಯಪ್ರಾಣಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:ದೇಶದ ಅತ್ಯುತ್ತಮ ಮೃಗಾಲಯಗಳಲ್ಲಿ ಮೈಸೂರು ಮೃಗಾಲಯಕ್ಕೆ ಮೂರನೇ ಸ್ಥಾನ
ಜೀವ ವೈವಿಧ್ಯತೆ ಇಳಿಕೆ:ಕೇಂದ್ರ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜಯ್ ಕುಮಾರ್ ಶುಕ್ಲಾ ಮಾತನಾಡಿ, 'ಪರಿಸರ ನಾಶದಿಂದ ಜೀವ ವೈವಿಧ್ಯತೆಯಲ್ಲಿ ಶೇ.68 ರಷ್ಟು ಇಳಿಕೆಯಾಗಿದೆ. (ಲಿವಿಂಗ್ ಪ್ಲಾನೆಟ್ ಇಂಡೆಕ್ಸ್) ಜೀವಂತ ಗ್ರಹದ ಸೂಚ್ಯಂಕದ ವರದಿ ಗಮನಿಸಿದರೆ 1970 ರ ಬಳಿಕ ಜೀವ ವೈವಿಧ್ಯತೆಯ ನಷ್ಟ ಭಾರಿ ಪ್ರಮಾಣದಲ್ಲಿ ಆಗಿದೆ. ಈ ವೈವಿಧ್ಯತೆಯ ನಷ್ಟವನ್ನು ತಡೆಯುವ ಪ್ರಯತ್ನ ಆಗಬೇಕಿದೆ. ಇದನ್ನು ತಡೆಯುವುದು ನಮ್ಮ ಮುಂದಿರುವ ದೊಡ್ಡ ಸವಾಲು ಎಂದರು.