ಮೈಸೂರು: ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ನೇರ ಹಣಾಹಣಿಯಿದ್ದು, ಈ ಬಾರಿ ಬಿಜೆಪಿಯಿಂದಲೂ ಅಚ್ಚರಿಯ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಯುತ್ತಿದೆ. ಜೆಡಿಎಸ್‌ನಿಂದ ಹಾಲಿ ಶಾಸಕ ಕೆ.ಮಹದೇವು ಹಾಗೂ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕೆ. ವೆಂಕಟೇಶ್ ನಡುವೆ ಪ್ರಬಲ ಪೈಪೋಟಿ ಇದೆ. ಗೆಲ್ಲಲು ಎರಡು ಪಕ್ಷಗಳು ಈಗಾಗಲೇ ತಯಾರಿ ಕೂಡ ನಡೆಸಿವೆ.
ಎರಡು ಬಾರಿ ಕಡಿಮೆ ಅಂತರದಲ್ಲಿ ಸೋತ ಅನುಕಂಪವೋ ಅಥವಾ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವರ್ಚಸ್ಸಿನಿಂದಲೋ ಎನೋ, ಅಧಿಕಾರಕ್ಕೆ ಬಂದ ಹಾಲಿ ಜೆಡಿಎಸ್ ಶಾಸಕ ಕೆ.ಮಹದೇವು ಅವರ ಪುತ್ರ ಪ್ರಸನ್ನ ದೊಡ್ಡಕೋಟೆ ಕೂಡ ಕ್ಷೇತ್ರದಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ ಹಾಗೂ ಹೆಚ್.ಡಿ.ಕುಮಾರಸ್ವಾಮಿಯ ತೀವ್ರ ಸಮರಕ್ಕೆ ಕಾರಣವಾಗಿದ್ದ ಮೈಮುಲ್ ಚುನಾವಣೆಯಲ್ಲಿ, ತನ್ನ ಬಣ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾದ ಜಿಟಿಡಿ, ಅತೀ ಚಿಕ್ಕ ವಯಸ್ಸಿನ ಶಾಸಕ ಕೆ.ಮಹದೇವು ಅವರ ಪುತ್ರನನ್ನು ಅಧ್ಯಕ್ಷಗಾದಿಗೆ ಏರಿಸುವ ಮೂಲಕ, ಪಿರಿಯಾಪಟ್ಟಣದಲ್ಲಿ ತೆನೆ ಮತ್ತಷ್ಟು ಬಿಗಿಯಾಗಿ ನೆಲಯೂರಲು ಕಾರಣರಾಗಿದ್ದಾರೆ. ಇದೇ ಈಗ ಪಿರಿಯಾಪಟ್ಟಣ ಜೆಡಿಎಸ್ ಕೋಟೆಯಾಗಿ ಪರಿಣಮಿಸಿದೆ.
ಕ್ಷೇತ್ರದ ವೈಶಿಷ್ಟ್ಯ ಹೀಗಿದೆ:ಕ್ಷೇತ್ರದಲ್ಲಿ ಒಕ್ಕಲಿಗರೇ ನಿರ್ಣಾಯಕ ಮತದಾರರು. ಇವರೊಂದಿಗೆ ಕುರುಬ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಲಿಂಗಾಯತ ಸಮೂದಾಯ ಕೂಡ ಪ್ರಾಬಲ್ಯ ಹೊಂದಿವೆ. 1952 ರಿಂದ ಈವರೆಗೂ ನಡೆದ ಚುನಾವಣೆಗಳಲ್ಲಿ ಆರು ಬಾರಿ ಕಾಂಗ್ರೆಸ್ ಗೆದ್ದಿದ್ದರೆ ಮೂರು ಬಾರಿ ಜೆಡಿಎಸ್ ಗದ್ದುಗೆ ಏರಿದೆ. ಎರಡು ಬಾರಿ ಪಕ್ಷೇತರ, ಒಮ್ಮೆ ಜನತಾಪಕ್ಷ, ಒಮ್ಮೆ ಬಿಜೆಪಿ ಪಾಲಾಗಿರುವುದು ಈ ಕ್ಷೇತ್ರದ ವೈಶಿಷ್ಟ್ಯ. ಇದೀಗ ಚುನಾವಣೆ ಹೊಸ್ತಿಲಲ್ಲಿರುವುದರಿಂದ ಕ್ಷೇತ್ರದಲ್ಲಿ ಮತ್ತೆ ಲೆಕ್ಕಾಚಾರ ನಡೆಯುತ್ತಿದೆ.
ಐದು ಬಾರಿ ಗೆದ್ದಿದ್ದ ವೆಂಕಟೇಶ್:ಮತ್ತೊಂದು ವಿಶೇಷ ಎಂದರೆ ಕಳೆದ ಬಾರಿ ಸೋತ ಕೆ.ವೆಂಕಟೇಶ್, ಈ ಕ್ಷೇತ್ರದಲ್ಲಿ ಐದು ಬಾರಿ ಗೆಲುವು ಸಾಧಿಸಿದ್ದಾರೆ. ಆದರೆ, ಇವರ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯ ಅಷ್ಟಾಗಿ ಮುನ್ನಲೆಗೆ ಬಾರದಿರುವುದು ಹಾಗೂ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವಲ್ಲಿ ವಿಫಲರಾಗಿದ್ದೇ ಅವರ ಸೋಲಿಗೂ ಕಾರಣವಾಯಿತೆನ್ನುವುದು ಕ್ಷೇತ್ರದ ಜನರ ಮಾತು. ಇನ್ನೂ ಕ್ಷೇತ್ರದಲ್ಲಿ ತೋಟದ ಮನೆಯಿದ್ದರೂ ಜನರಿಗೆ ಲಭ್ಯವಾಗದ ಶಾಸಕರೆಂಬ ಹಣೆ ಪಟ್ಟಿಯೂ ಸಹ ವೆಂಕಟೇಶ್ ಅವರ ಸೋಲಿಗೆ ಕಾರಣ ಎನ್ನುವುದು ರಾಜಕೀಯ ವಿಶ್ಲೇಷಕರ ಮಾತು.
ಅಭಿವೃದ್ಧಿ ರಾಜಕಾರಣದ್ದೇ ಕೋಲ್ಡ್ ವಾರ್:ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ ಜೆಡಿಎಸ್ ಹಾಗೂ ಕೈ ಕಾರ್ಯಕರ್ತರ ನಡುವೆ ಇನ್ನಿಲ್ಲದ ಪೈಪೋಟಿ ಚರ್ಚೆ ನಡೆಯುತ್ತಲೇ ಇದೆ. ಕೆ.ವೆಂಕಟೇಶ್ ಅವರ ಅವಧಿಯಲ್ಲಿ ಬಸ್ ಡಿಪೋ, ಅರಸು ಭವನ, ಅಗ್ನಿಶಾಮಕ ಕೇಂದ್ರ, ಬೆಟ್ಟದಪುರ ಗ್ರಾಮದಲ್ಲಿ ಪ್ರಥಮ ದರ್ಜೆ ಕಾಲೇಜು, ಬೆಟ್ಟದಪುರ ಪೊಲೀಸ್ ಠಾಣೆ, ತಾಲೂಕಿನ ಬೆಟ್ಟದಪುರ ಹೆದ್ದಾರಿ, ಪುರಸಭೆ ಕಟ್ಟಡ ನಿರ್ಮಾಣ, ತಾಲೂಕು ಸಾರ್ವಜನಿಕ ಆಸ್ಪತ್ರೆ, ವಾಲ್ಮೀಕಿ ಭವನಕ್ಕೆ ಚಾಲನೆ ದೊರೆತಿದೆ ಎಂಬುದು ಕೈ ಕಾರ್ಯಕರ್ತರ ಮಾತಾಗಿದೆ.
ಆದರೆ, ಹಾಲಿ ಶಾಸಕ ಕೆ.ಮಹದೇವು 180 ನೂತನ ಶಾಲಾ ಕೊಠಡಿ ನಿರ್ಮಾಣ, ತಾಲೂಕಿಗೆ 2 ಪಬ್ಲಿಕ್ ಶಾಲೆ ಮಂಜೂರಾತಿ, ಪಿರಿಯಾಪಟ್ಟಣ ಹಾಗೂ ಬೆಟ್ಟದಪುರದಲ್ಲಿ ತಲಾ 30.91ಕೋಟಿ ರೂ. ವೆಚ್ಚದ ಆಧುನಿಕ ತಂತ್ರಜ್ಞಾನ ಉಳ್ಳ ಐಟಿಐ ಕಾಲೇಜು ನಿರ್ಮಾಣ, 8ಕೋಟಿ ರೂ. ವೆಚ್ಚದಲ್ಲಿ ನೂತನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣ, 4ಕೋಟಿ ರೂ. ವೆಚ್ಚದಲ್ಲಿ ಬೆಟ್ಟದಪುರ ಗ್ರಾಮದಲ್ಲಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ, 10 ನೂತನ ಅಂಗನವಾಡಿ ಕಟ್ಟಡ, ಹಾರನಹಳ್ಳಿ ಹಾಗೂ ಬೆಟ್ಟದಪುರ ಗ್ರಾಮದಲ್ಲಿ ನೂತನ ನಾಡಕಚೇರಿ, 239 ಕೋಟಿ ರೂ ವೆಚ್ಚದಲ್ಲಿ 303 ಗ್ರಾಮಗಳಿಗೆ ಕಾವೇರಿ ನದಿಯಿಂದ ಶುದ್ಧ ಕುಡಿಯುವ ನೀರಿನ ಯೋಜನೆ, ಪುರಸಭಾ ವ್ಯಾಪ್ತಿಯಲ್ಲಿ 130 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ನದಿಯಿಂದ ಶುದ್ಧ ಕುಡಿಯುವ ನೀರಿನ ಯೋಜನೆ, 60 ಮೇಲ್ತೊಟ್ಟಿ ನಿರ್ಮಾಣ, 45 ಕುಡಿಯುವ ನೀರಿನ ಘಟಕ, ಪುರಸಭಾ ವ್ಯಾಪ್ತಿಯಲ್ಲಿ ಒಳ ಚರಂಡಿ ಕಾಮಗಾರಿ, ಚಪ್ಪರದಹಳ್ಳಿ ಹಾಗೂ ಬೈಲಕುಪ್ಪೆ ಗ್ರಾಮದಲ್ಲಿ ತಲಾ 1.35ಕೋಟಿ ರೂ ವೆಚ್ಚದ ನೂತನ ಪ್ರಾಥಮಿಕ ಅರೋಗ್ಯ ಕೇಂದ್ರ ಮತ್ತು ರಾವಂದೂರು ಗ್ರಾಮದಲ್ಲಿ 1.50 ಕೋಟಿ ರೂ ವೆಚ್ಚದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರದ ನವೀಕರಣ, ಒಟ್ಟು 8 ವಿದ್ಯುತ್ ಉಪಕೇಂದ್ರಗಳ ಅನುಮೋದನೆ ಕಣಗಾಲು, ಕಂಪಲಾಪುರ, ಕಗ್ಗುಂಡಿ, ಆಯಿತನಹಳ್ಳಿ, ಹುಣಸವಾಡಿ, ಚಿಕ್ಕ ನೇರಳೆ, ಮುತ್ತೂರು, ಪಂಚವಳ್ಳಿ ಅಭಿವೃದ್ಧಿಯಾಯಿತು. ಹೀಗೆ ಒಂದಿಲ್ಲೊಂದು ಯೋಜನೆಯನ್ನು ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ನೀಡಿರುವ ಬಗ್ಗೆ ಹಾಗೂ ಇದರ ಬಗ್ಗೆ ಮುಕ್ತ ಚರ್ಚೆಗೆ ಬರುವಂತೆ ತಮ್ಮ ಫೇಸ್ ಬುಕ್ ಖಾತೆ ಮೂಲಕವೇ ಶಾಸಕರು ಕರೆದಿರುವುದು ಕ್ಷೇತ್ರದ ವಿಶೇಷ.