ಮೈಸೂರು: ಜಮೀನಿನಲ್ಲಿ ಹುಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ನಂಜನಗೂಡಿನ ತಾಂಡವಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ. ಗ್ರಾಮದ ಸುತ್ತಲಿನ ಜನರು ಭಯಭೀತರಾಗಿದ್ದು, ತೋಟ ಗದ್ದೆಗಳಿಗೆ ಹೋಗಲು ಹೆದರುತ್ತಿದ್ದಾರೆ. ಗ್ರಾಮದ ಯುವಕ ರಘು ಮತ್ತು ರೇವಣ್ಣ ಹಾಗೂ ರೈತ ಮಹಾದೇವ ಅವರು ಭಾನುವಾರ ಬೆಳಿಗ್ಗೆ ಹುಲಿ ಕಂಡು ಗಾಬರಿಗೊಂಡಿದ್ದರು. ಕೂಡಲೇ ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಗ್ರಾಮಸ್ಥರಿಂದ ಮಾಹಿತಿ ಪಡೆದರು. ಗ್ರಾಮಸ್ಥರ ಹೇಳಿಕೆಯಂತೆ ಹುಲಿ ಓಡಾಡಿರುವ ಮಾರ್ಗದಲ್ಲಿ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದರು. ಆದರೆ ಹುಲಿ ಹೆಜ್ಜೆ ಗುರುತು ಸಿಗದೆ ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳ ಮಾಹಿತಿಯಂತೆ ಅಧಿಕಾರಿಗಳು ರೈತ ಮಹೇಶ ಹಾಗೂ ಕರಿಗೌಡರ ಜಮೀನುಗಳಲ್ಲಿ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದರು. ಆದರೆ ಇಲ್ಲಿ ಹುಲಿಯ ಬದಲು ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ. ಹುಲಿ ಇದ್ದರೂ ಇರಬಹುದು ಎಂದು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ.